Bengaluru | ಅಪ್ರಾಪ್ತೆಗೆ ಕಿರುಕುಳ ಆರೋಪ: ಬಾಕ್ಸಿಂಗ್ ತರಬೇತುದಾರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ನಗರದಲ್ಲಿರುವ ಕಸ್ತೂರಬಾ ರಸ್ತೆಯಲ್ಲಿನ ಕ್ರೀಡಾಂಗಣದ ಆವರಣದೊಳಗಿರುವ ಖಾಸಗಿ ಬಾಕ್ಸಿಂಗ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದ 17 ವರ್ಷದ ಅಪ್ರಾಪ್ತೆಗೆ 4 ತಿಂಗಳುಗಳಿಂದ ನಿರಂತರ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, 50 ವರ್ಷ ವಯಸ್ಸಿನ ಬಾಕ್ಸಿಂಗ್ ತರಬೇತುದಾರನ ವಿರುದ್ಧ ಸಂಪಂಗಿರಾಮನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ನೊಂದ ಬಾಲಕಿಯ ತಾಯಿ ನೀಡಿರುವ ದೂರಿನ ಅನ್ವಯ ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ದೂರು ನೀಡಿದ್ದಾರೆ. ಬಾಕ್ಸಿಂಗ್ ಸ್ಪರ್ಧೆಗಾಗಿ ಚೆನ್ನೈನಲ್ಲಿದ್ದ ಬಾಲಕಿಯನ್ನು ಮೇ 17ರಂದು ತನ್ನ ಕೋಣೆಗೆ ಕರೆಸಿಕೊಂಡಿದ್ದ ಆರೋಪಿ, ಆಕೆಯ ಪ್ರತಿರೋಧದ ನಡುವೆಯೂ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಮೊದಲು ಬೆಂಗಳೂರಿನ ಕ್ರೀಡಾಂಗಣದಲ್ಲಿಯೂ ಇದೇ ರೀತಿ ಅನುಚಿತ ವರ್ತನೆಯ ಘಟನೆಗಳು ನಡೆದಿವೆ. ಆದರೆ, ಆ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಸಂತ್ರಸ್ತೆಯು ತನ್ನ ಕುಟುಂಬದವರಿಂದ ವಿಷಯ ಮುಚ್ಚಿಟ್ಟಿದ್ದಳು ಎಂದು ಬಾಲಕಿಯ ತಾಯಿ ದೂರಿನಲ್ಲಿ ಹೇಳಿದ್ದಾರೆ.
ಬಾಲಕಿಯ ತಾಯಿ ನೀಡಿರುವ ದೂರಿನ ಮೇರೆಗೆ ತರಬೇತುದಾರನ ವಿರುದ್ಧ ಪೋಕ್ಸೋ ಕಾಯ್ದೆ - 2012ರ ಸೆಕ್ಷನ್ 8 ಮತ್ತು 12 ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 2023ರ ಸೆಕ್ಷನ್ 351 (2) ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






