‘ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕʼ ಪೋಸ್ಟ್ ವೈರಲ್; ಪುರಭವನದ ಬಳಿ ‘ಮಾನವ ಸರಪಳಿ’ಗೆ ಅನುಮತಿಯಿಲ್ಲ ಎಂದ ಬೆಂಗಳೂರು ಪೊಲೀಸರು

ಬೆಂಗಳೂರು: ವಿಡಂಬನಾತ್ಮಕ ರಾಜಕೀಯ ಗುಂಪು ‘ಕಾಕ್ರೋಚ್ ಜನತಾ ಪಾರ್ಟಿ’ಯು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸುತ್ತಿದ್ದು, ಮೇ 24ರಂದು ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ಶಾಂತಿಯುತ ಮಾನವ ಸರಪಳಿ ಪ್ರತಿಭಟನೆ ನಡೆಸುವ ಕುರಿತು ʼಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕʼ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ.
‘ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರು ನಿರುದ್ಯೋಗಿ ಯುವಕರನು ಜಿರಲೆಗಳೆಂದು ಕರೆದಿದ್ದಾರೆ. ಯುವಕರಿಗೆ ಭವಿಷ್ಯ ಇಲ್ಲದಂತಾಗಿದೆ. ಬೆಲೆ ಏರಿಕೆಯಿಂದ ಬದುಕಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ನೀಟ್ ಪರೀಕ್ಷೆ ಇಲ್ಲ. ನಮ್ಮ ಮತಗಳ ಕಳ್ಳತನ ನಡೆಯುತ್ತಿದೆ. ಬನ್ನಿ ಕಾಕ್ರೋಚ್ ಗಳ ಸಂದೇಶ ನೀಡೋಣ. ಇಲ್ಲಿ ನಾಯಕರಿಲ್ಲ, ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆ ಇಲ್ಲ. ಪ್ರಜೆಗಳು ಕೈ ಜೋಡಿಸುವುದೇ ಸಂಘಟನೆ. ಬನ್ನಿ ಶಕ್ತಿ ಪ್ರದರ್ಶಿಸೋಣ. ಆತ್ಮ ವಂಚಕ ಆಡಳಿತಕ್ಕೆ ಸಂದೇಶ ರವಾನಿಸೋಣ” ಎಂದು ಕರೆ ನೀಡಲಾಗಿತ್ತು.
ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಟೌನ್‍ಹಾಲ್ ಬಳಿ ಕಾರ್ಯಕ್ರಮ ಆಯೋಜನೆಗೆ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷದಿಂದ ಅನುಮತಿ ಕೋರಿರುವ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. ಈ ಸಂಬಂಧ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಫ್ರೀಡಂ ಪಾರ್ಕ್ ಹೊರತುಪಡಿಸಿ, ಬೆಂಗಳೂರಿನ ಬೇರೆ ಯಾವುದೇ ಸ್ಥಳಗಳಲ್ಲಿ ಧರಣಿ, ಪ್ರತಿಭಟನಾ ರ‍್ಯಾಲಿ ನಡೆಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಇದನ್ನು ಉಲ್ಲಂಘಿಸಿ ಟೌನ್‍ಹಾಲ್ ಮುಂಭಾಗ ಜನರು ಬಂದು ಸೇರುವುದು ನ್ಯಾಯಾಲಯ ಆದೇಶದ ಸ್ಪಷ್ಪ ಉಲ್ಲಂಘನೆಯಾಗಿರುತ್ತದೆ. ಹೀಗಾಗಿ ಜನರು ಟೌನ್ ಹಾಲ್ ಬಳಿ ಆಗಮಿಸಿ ಗುಂಪು ಸೇರಬಾರದು ಎಂದು ಬೆಂಗಳೂರು ಪೊಲೀಸರು ಪ್ರಕಟನೆ ನೀಡಿದ್ದಾರೆ.






