Bengaluru | ನಿಷೇಧಿತ ಮಾದಕ ವಸ್ತುಗಳ ಮಾರಾಟ: 35 ಕೋಟಿ ರೂ.ಮೌಲ್ಯದ ಮಾಲು ವಶ; ಎಂಟು ಮಂದಿಯ ಬಂಧನ

ಬೆಂಗಳೂರು: ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ವಿದೇಶಿ ಪ್ರಜೆಗಳ ಸಹಿತ ಎಂಟು ಮಂದಿಯನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಸದಿಲ್ಲಿಯಿಂದ ಬೆಂಗಳೂರಿಗೆ ಮಾದಕ ಪದಾರ್ಥ ತಂದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸೆನೆಗಲ್ ಮೂಲದ ಡನ್ಫಾ ಗೆರಾಲ್ಡ್, ತಾಂಜೇನಿಯಾ ಮೂಲದ ಮೆಗ್ರಾತ್, ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ, ಹೊಸದಿಲ್ಲಿ ಮೂಲದ ರೀನಾ ಯಾದವ್, ದೆಬಾಶಿಶ್ ಬ್ಯಾನರ್ಜಿ ಮತ್ತು ಬೆಂಗಳೂರಿನ ಧೀರಜ್, ಮೊಹಮ್ಮದ್ ಮನ್ಸೂರ್ ಹಾಗೂ ಅಬ್ದುಲ್ ಸಮದ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಬರೋಬ್ಬರಿ 35 ಕೋಟಿ ರೂ. ಮೌಲ್ಯದ 17.4 ಕೆ.ಜಿ. ಎಂಡಿಎಂಎ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾರಿಗೂ ಸಂದೇಹ ಬಾರದಂತೆ ಸೀರೆಗಳು, ಇಸ್ತ್ರಿ ಮಾಡಲು ಬಳಸುವ ಟೇಬಲ್‍ಗಳು ಮತ್ತು ಕುರ್ಚಿಗಳ ಒಳಭಾಗದಲ್ಲಿ ಎಂಡಿಎಂಎ ಕ್ರಿಸ್ಟಲ್‍ಗಳನ್ನು ಅಡಗಿಸಿ, ಸುಂದರವಾದ ಉಡುಗೊರೆಗಳಂತೆ ಆರೋಪಿಗಳು ಪ್ಯಾಕ್ ಮಾಡುತ್ತಿದ್ದರು. ನಂತರ ಅವುಗಳನ್ನು ಚಾಣಾಕ್ಷತನದಿಂದ ದಿಲ್ಲಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಹೀಗೆ ಬೆಂಗಳೂರು ತಲುಪುವ ಮಾದಕವನ್ನು ನಿರ್ಜನ ಪ್ರದೇಶಗಳಲ್ಲಿ ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ರೀತಿ ಹೆಬ್ಬಾಳದ ಆನಂದನಗರದ ಸಮೀಪ ದಂಧೆಯಲ್ಲಿ ತೊಡಗಿದ್ದ ಮೂವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಮೊದಲಿಗೆ 4 ಕೆ.ಜಿ. 300 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಬಳಿಕ ಸರ್ಜಾಪುರದ ಚೂಡಸಂದ್ರದಲ್ಲಿರುವ ಸ್ಥಳೀಯ ಪೆಡ್ಲರ್ ಮೊಹಮ್ಮದ್ ಮನ್ಸೂರ್ ನಿವಾಸದ ಮೇಲೆ ದಾಳಿ ಮಾಡಿದಾಗ 10 ಕೆ.ಜಿ. ಎಂಡಿಎಂಎ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಬ್ದುಲ್ ಸಮದ್ ಎಂಬಾತನ ಹೆಣ್ಣೂರಿನ ನಿವಾಸದ ಮೇಲೆಯೂ ದಾಳಿ ನಡೆಸಿ 3.5 ಕೆ.ಜಿ. ಮಾದಕ ವಸ್ತುವನ್ನು ಜಪ್ತಿ ಮಾಡಲಾಯಿತು. ವಿಚಾರಣೆ ವೇಳೆ, ಹೊಸದಿಲ್ಲಿ ಮತ್ತು ಹರಿಯಾಣದವರೆಗೂ ಆರೋಪಿಗಳ ಜಾಲ ವಿಸ್ತರಿಸಿರುವುದು ಬಯಲಾಗಿತ್ತು.
ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಹಾಗೂ ಜೆ.ಸಿ.ನಗರ ಎಸಿಪಿ ಕೆ.ಎಸ್. ತನ್ವಿರ್ ಅವರ ನೇರ ಮಾರ್ಗದರ್ಶನದಲ್ಲಿ ಸುಮಾರು 40 ಜನ ಪೊಲೀಸ್ ಸಿಬ್ಬಂದಿಗಳ ವಿಶೇಷ ತಂಡ ರಚಿಸಿಕೊಂಡು ಹೊಸದಿಲ್ಲಿಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.






