Bengaluru | ಮಹಿಳೆಯ ಅಪಹರಿಸಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಆಸ್ತಿಗಾಗಿ ಮಹಿಳೆಯೊಬ್ಬರನ್ನು ಅಪಹರಿಸಿ, ಸೈನೈಡ್ ಮಾತ್ರೆ ನೀಡಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಬೆಂಗಳೂರಿನ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರೂ. ದಂಡ ವಿಧಿಸಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಎಸ್.ನೂರ್ ಅಹಮ್ಮದ್(43) ಹಾಗೂ ಸತ್ಯನಾರಾಯಣ ಅಲಿಯಾಸ್ ಸತ್ಯ(39) ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದು, ಪ್ರಕರಣದಲ್ಲಿದ್ದ ಇನ್ನಿಬ್ಬರು ಆರೋಪಿಗಳಾದ ಬೆಸ್ತಕುಮಾರ್ ಹಾಗೂ ರಘು ಅಲಿಯಾಸ್ ಮೆಂಟಲ್ ರಘು ಮೃತಪಟ್ಟಿದ್ದಾರೆ.
ಸುಬ್ರಮಣ್ಯನಗರ ಠಾಣಾ ವ್ಯಾಪ್ತಿಯ ಗಾಯತ್ರಿನಗರದ ನಿವಾಸಿ ಕೆ.ಸೀತಾ ಎಂಬವರು ಆಸ್ತಿ ಪತ್ರಕ್ಕೆ ಸಹಿ ಹಾಕಲು ಒಪ್ಪುತ್ತಿರಲಿಲ್ಲ. ಇದರಿಂದ ಕೋಪಗೊಂಡ ಪರಿಚಿತರಿಬ್ಬರು ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ 2021ರ ಮಾ.26ರಂದು ರಘು ಹಾಗೂ ಸತ್ಯನಾರಾಯಣ ಜೊತೆ ಸೇರಿ ಕೆ.ಸೀತಾ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದರು.
ತುಮಕೂರು ರಸ್ತೆ ಹಾಗೂ ಬೆಳ್ಳೂರು ಕ್ರಾಸ್ ಮಾರ್ಗವಾಗಿ ಮುಳ್ಳಯ್ಯನಗಿರಿ ಕಡೆಗೆ ಪ್ರಯಾಣಿಸುತ್ತಿದ್ದಾಗ, ಆಕೆಗೆ ಸೈನೈಡ್ ಮಿಶ್ರಿತ ಮಾತ್ರೆ ನೀಡಿ ಕೊಲೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಹೊಸಪೇಟೆ ಬಳಿ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಈ ಕುರಿತು 2021ರ ನವೆಂಬರ್ನಲ್ಲಿ ಸುಬ್ರಮಣ್ಯನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.






