ಮಾನ್ಯತೆ ನವೀಕರಣವಾಗದ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ವರ್ಗಾಹಿಸುವ ನಿರ್ಧಾರಕ್ಕೆ ಭೋಜೇಗೌಡ ವಿರೋಧ

ಬೆಂಗಳೂರು: 2025-26ನೇ ಸಾಲಿಗೆ ಮಾನ್ಯತೆ ನವೀಕರಣವಾಗದ ಪ್ರೌಢಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಇತರ ಪ್ರೌಢಶಾಲೆಗಳಿಗೆ ವರ್ಗಾಹಿಸುವ ಸರಕಾರದ ನಿರ್ಧಾರವನ್ನು ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್. ಭೋಜೇಗೌಡ ವಿರೋಧಿಸಿದ್ದಾರೆ.
ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮನವಿ ಪತ್ರವನ್ನು ಸಲ್ಲಿಸಿದ ಅವರು, ಪರೀಕ್ಷಾ ಮಂಡಳಿಯು ಮಾನ್ಯತೆ ನವೀಕರಣವಾಗದ ಪ್ರೌಢಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಇತರ ಸರಕಾರಿ ಹಾಗೂ ಮಾನ್ಯತೆಗೊಂಡ ಅನುದಾನಿತ ಪ್ರೌಢ ಶಾಲೆಗಳಿಗೆ ಹಾಜರಾಗುವಂತೆ ಕ್ರಮವಹಿಸಲು ಸುತ್ತೋಲೆ ಹೊರಡಿಸಿದೆ. ಇದನ್ನು ಹಿಂಪಡೆದು, ಮಾನ್ಯತೆ ನವೀಕರಣದ ಪ್ರತಿಯನ್ನು ಕಡ್ಡಾಯಗೊಳಿಸದೆ ಎಲ್ಲ ವಿದ್ಯಾರ್ಥಿಗಳಿಗೆ ಅದೇ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರವು 2025-26ನೇ ಸಾಲಿಗೆ ಸಂಬಂಧಿಸಿದಂತೆ ಅನುದಾನಿತ ಮತ್ತು ಖಾಸಗಿ ಪ್ರೌಢಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹಲವಾರು ಷರತ್ತು-ನಿಬಂಧನೆಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರವು ಮಾನ್ಯತೆ ನವೀಕರಣಕ್ಕಾಗಿ ಇರುವ ಕಠಿಣ ನಿಯಮಗಳನ್ನು ಸಡಿಲಿಸಲು ಒಂದು ಉಪಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ ಸಭೆಯನ್ನು ನಡೆಸಿದ್ದು, ಅದರ ವರದಿಯನ್ನು ಶೀಘ್ರವಾಗಿ ಸರಕಾರಕ್ಕೆ ಸಲ್ಲಿಸಲಿದೆ. ಇದರ ನಡುವೆ ಪರೀಕ್ಷಾ ಮಂಡಳಿಯು ಸುತ್ತೋಲೆ ಹೊರಡಿಸಿದೆ. ಹೀಗಾಗಿ ಉಪಸಮಿತಿ ವರದಿ ನೀಡುವವರೆಗೆ ಮಾನ್ಯತೆ ನವೀಕರಣದ ಪ್ರತಿಯನ್ನು ಕಡ್ಡಾಯಗೊಳಿಸದೆ ಎಲ್ಲ ವಿದ್ಯಾರ್ಥಿಗಳಿಗೆ ಅದೇ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.







