ಮೋದಿ ನೀತಿಗಳನ್ನು ಟೀಕಿಸಿದ ಬಿಜೆಪಿ ಸದಸ್ಯನನ್ನು ಬೆಂಗಳೂರಿನಲ್ಲಿ ಬಂಧಿಸಿದ ಗುಜರಾತ್ ಪೊಲೀಸರು: ಸುಬ್ರಮಣಿಯನ್ ಸ್ವಾಮಿ ಆರೋಪ

ಸುಬ್ರಮಣಿಯನ್ ಸ್ವಾಮಿ (Photo: PTI)
ಬೆಂಗಳೂರು: ಪ್ರಧಾನಿ ಮೋದಿಯವರ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದ ಕಾರಣಕ್ಕೆ ಗುಜರಾತ್ನ ಪೊಲೀಸ್ ತಂಡವೊಂದು ಬೆಂಗಳೂರಿನಲ್ಲಿ ಬಿಜೆಪಿ ಯುವ ಮುಖಂಡನನ್ನೇ ಬಂಧಿಸಿರುವುದಾಗಿ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ಯುವ ಮುಖಂಡ ಗುರುದತ್ ಶೆಟ್ಟಿ ಕಾರ್ಕಳ ಬಂಧಿತ ಎಂದು ಗುರುತಿಸಲಾಗಿದೆ.
ಮಂಗಳವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸುಬ್ರಮಣಿಯನ್ ಸ್ವಾಮಿ, "ಗುಜರಾತ್ ರಾಜ್ಯದ ಪೊಲೀಸ್ ತಂಡ ಇಂದು ಬೆಂಗಳೂರಿಗೆ ಬಂದು, ಮೋದಿ ಅವರ ನೀತಿಗಳನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ಯುವ ಘಟಕದ ಸದಸ್ಯ ಗುರುದತ್ ಕಾರ್ಕಳ ಶೆಟ್ಟಿ ಅವರನ್ನು ಬಂಧಿಸಿದೆ. ಪೊಲೀಸ್ ದೌರ್ಜನ್ಯದ ಬಗ್ಗೆ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ವಕೀಲರ ಸಮ್ಮುಖದಲ್ಲಿ ತಮ್ಮ ಹೇಳಿಕೆಯನ್ನು ನೀಡಲು ಅವಕಾಶ ನೀಡಬೇಕು. ಈ ವಿಷಯದಲ್ಲಿ ನನ್ನ ವಕೀಲ ಸ್ನೇಹಿತರು ಮುಂದಾಗಿ, ಅವರ ಮೂಲಭೂತ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಂತೆ ನಾನು ವಿನಂತಿಸಿದ್ದೇನೆ. ವಿಚಾರಣೆಯು ನಮ್ಮ ಸ್ಥಳೀಯ ವಕೀಲರ ಸಾನ್ನಿಧ್ಯದಲ್ಲಿಯೇ ನಡೆಯಬೇಕು." ಎಂದು ಹೇಳಿದ್ದಾರೆ.







