ಜ್ಯೋತಿಷಿ ಕೊಲೆ ಕೇಸ್‌ನಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ನೈತಿಕ ಹೊಣೆ ಹೊತ್ತುಕೊಳ್ಳಬೇಕು : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ. ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಶಾಸಕ ಎಸ್. ಸುರೇಶ್, ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರರಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕಮಲಾಕರ ಭಟ್ ಎಂಬ ಜ್ಯೋತಿಷಿ ಭಾಗಿಯಾದ ಕೊಲೆ ಕೇಸ್ ನಲ್ಲಿ ರಾಜಾಜಿನಗರ ಶಾಸಕ ಎಸ್. ಸುರೇಶ್ ಅವರಂತವರ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ "ಗುರೂಜಿ" ಕಮಲಾಕರ ಭಟ್ಟನನ್ನು ಓರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು, ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಓರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ ಎಂದು ತಿಳಿಸಿದ್ದಾರೆ.
ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು 'ಅಕ್ರಮ'ಗಳನ್ನು ಸಂಪಾದಿಸಿಕೊಂಡು ಇಂತಹ "ಜೀ-ಗುರೂಜಿ"ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ 'ಅಕ್ರಮ ದಂಧೆ'ಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸದನದಲ್ಲಿ ಮಹಿಳೆಯರನ್ನೇ ಅಪಮಾನ ಮಾಡುವವರು, ಸಮಾಜದಲ್ಲಿ ಸ್ತ್ರೀ ಪೀಡಕರು, ಅತ್ಯಾಚಾರಿಗಳು, ಕೊಲೆಗಡಕರು, ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸುವವರಿಗೆ ನೇರವಾಗಿ ಬಿಜೆಪಿ ಜೊತೆಗೆ ಅವಿನಾಭಾವ ಸಂಬಂಧ ಇರುವುದಾದರೂ ಹೇಗೆ? ಬಿಜೆಪಿ ಕರ್ನಾಟಕದಲ್ಲಿ ಈ ಕಾರಣಕ್ಕಾಗಿಯೇ ಪ್ರತ್ಯೇಕ ಮೋರ್ಚಾ ಇದೆಯೇ? ಅಥವಾ ಕ್ರಿಮಿನಲ್ ಗಳಲ್ಲಿ ಭಾಗವಹಿಸುವವರಿಗೆ ಹಾಗೂ ಪ್ರೋತ್ಸಾಹ ನೀಡುವವರಿಗೆ ಮಾತ್ರ ಸ್ಥಾನಮಾನಗಳು ಸಿಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಗೆ ನೆನಪಿಸಲು ಬಯಸುತ್ತೇನೆ. ಭಾರತ ಸಂವಿಧಾನದ 51A(h) ಆರ್ಟಿಕಲ್ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವೆಂದರೆ, “ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಗತಿಪರ ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು". ಈ ವಿಧಿಯ ಉದ್ದೇಶವು ಅಂಧಶ್ರದ್ಧೆ, ಪೂರ್ವಗ್ರಹಗಳನ್ನು ಅವಲಂಬಿಸದೆ, ತಾರ್ಕಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಗತಿಶೀಲ ದೃಷ್ಟಿಕೋನವನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದ್ದಾರೆ.
ಸುರೇಶ್ ಕುಮಾರ್ ಅಂತವರು ಸಂವಿಧಾನದ ಈ ಆರ್ಟಿಕಲ್ ಅನ್ನು ಉಲ್ಲಂಘಿಸಿ ಅಪರಾಧ ಮಾಡಿದ್ದೇ ಕಮಲಾಕರ ಭಟ್ ಅಂತವರು ಕೊಲೆಗಾರರಾಗಲು ಕಾರಣವಾಗಿದೆ. ಹಾಗಾಗಿಯೇ ಶಾಸಕ ಸುರೇಶ್ ಕುಮಾರ್ ಕೂಡಾ ಈ ಕೊಲೆಯ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್, ‘ಬಿ.ಕೆ.ಹರಿಪ್ರಸಾದ್‍ರೇ, ನಿಮ್ಮ ಫೇಸ್‍ಬುಕ್ ಬರಹವನ್ನು ಗಮನಿಸಿದೆ. ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ ‘ಬೌದ್ಧಿಕ ದಿವಾಳಿತನ’ವನ್ನು ಎತ್ತಿ ತೋರಿಸುವಂತಿದೆ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ ‘ನೈತಿಕ ಹೊಣೆ’ ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು. ಇನ್ನಾದರೂ ಆಧಾರರಹಿತ ಆರೋಪಗಳನ್ನು ನಿಲ್ಲಿಸಿ, ಘನತೆಯುತ ರಾಜಕಾರಣ ಮಾಡಿ. ಎಂಇಎಸ್ ಕಾಲೇಜಿನಲ್ಲಿ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ನಾವಿಬ್ಬರು ಒಟ್ಟಿಗೆ ಶಿಕ್ಷಣ ಪಡೆದಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲೂ ಇಂದು ಬೇಸರವೆನಿಸುತ್ತದೆʼ ಎಂದು ಹೇಳಿದ್ದಾರೆ.







