ಬಿಎಂಆರ್ಸಿಎಲ್ನ ಗುಲಾಬಿ-ನೀಲಿ ಮಾರ್ಗಗಳ ಸಿಬಿಟಿಸಿ ಸಿಗ್ನಲಿಂಗ್ ವ್ಯವಸ್ಥೆಗೆ ರೈಲ್ವೆ ಮಂಡಳಿಯಿಂದ ಅನುಮೋದನೆ

ಬೆಂಗಳೂರು : ಬಿಎಂಆರ್ಸಿಎಲ್ನ ಗುಲಾಬಿ ಮಾರ್ಗ (ರೀಚ್-6) ಹಾಗೂ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಿಸಿರುವ ಹಂತ-2A ಮತ್ತು ಹಂತ-2B ಒಳಗೊಂಡ ಸಂಪೂರ್ಣ ನೀಲಿ ಮಾರ್ಗದ ಕಮ್ಯುನಿಕೇಷನ್ ಬೇಸ್ಟ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ.
ಈ ಅನುಮೋದನೆಯು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಗುಲಾಬಿ ಮಾರ್ಗದ ಕಾರ್ಯಾರಂಭದ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಎಂಆರ್‍ಸಿಎಲ್ ಕಳೆದ ಒಂದು ತಿಂಗಳಿನಿಂದ ರೈಲ್ವೆ ಮಂಡಳಿ ಹಾಗೂ ಆರ್‍ಡಿಎಸ್‍ಒ ಜೊತೆ ನಿರಂತರವಾಗಿ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ವಿಶೇಷವಾಗಿ ಇದು ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನೀಲಿ ಮಾರ್ಗಕ್ಕೂ ಅನ್ವಯಿಸುತ್ತದೆ. ಗುಲಾಬಿ ಮಾರ್ಗಕ್ಕೆ ಸಿಗ್ನಲಿಂಗ್ ಅನುಮೋದನೆಯು ಬಾಕಿ ಇದ್ದ ಪ್ರಮುಖ ಹಂತವಾಗಿದ್ದರೆ, ನೀಲಿ ಮಾರ್ಗದ ಉದ್ದೇಶಿತ ಕಾರ್ಯಾರಂಭಕ್ಕೂ ಸಾಕಷ್ಟು ಮುಂಚಿತವಾಗಿಯೇ ಈ ಅನುಮೋದನೆ ದೊರೆತಿದ್ದು, ಅಗತ್ಯ ಪರೀಕ್ಷೆ ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಸಕಾಲದಲ್ಲಿ ಕೈಗೊಳ್ಳಲು ಅನುಕೂಲವಾಗಲಿದೆ.
ಗುಲಾಬಿ ಮಾರ್ಗಕ್ಕೆ ಸಂಬಂಧಿಸಿದಂತೆ, ಬಿಎಂಆರ್‍ಸಿಎಲ್ ಇನ್ನುಳಿದ ತಾಂತ್ರಿಕ ಮತ್ತು ಶಾಸನಬದ್ಧ ಪ್ರಕ್ರಿಯೆಗಳಾದ ಆರ್‍ಡಿಎಸ್‍ಒದಿಂದ ಮಧ್ಯಂತರ ವೇಗ ಪ್ರಮಾಣೀಕರಣ, ಸಿಸಿಆರ್‍ಎಸ್ ಮೂಲಕ ರೈಲುಗಳ ಶಾಸನಬದ್ಧ ಪರಿಶೀಲನೆ, ಪ್ರಾಯೋಗಿಕ ಸಂಚಾರದ ನಂತರ ಅಂತಿಮ ಶಾಸನಬದ್ಧ ಪರಿಶೀಲನೆ ಹಾಗೂ ಪ್ರಯಾಣಿಕರ ಸೇವೆ ಆರಂಭಿಸಲು ಅಗತ್ಯವಿರುವ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸಲಿದೆ.
ಉಳಿದ ಪ್ರಕ್ರಿಯೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ಗುಲಾಬಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಯನ್ನು ಆರಂಭಿಸಲು ಬಿಎಂಆರ್‍ಸಿಎಲ್ ರೈಲ್ವೆ ಮಂಡಳಿ, ಆರ್‍ಡಿಎಸ್‍ಒ, ಸಿಸಿಆರ್‍ಎಸ್ ಹಾಗೂ ಸಂಬಂಧಪಟ್ಟ ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.






