ನಮ್ಮ ಮೆಟ್ರೋ ಪ್ರಯಾಣಿಕರಿಗೆ ʼಗುಡ್ ನ್ಯೂಸ್ʼ | ಮೊಬೈಲ್ ಕ್ಯೂಆರ್ ಆಧಾರಿತ ಪಾಸ್ ಪರಿಚಯಿಸಿದ BMRCL

ಸಅಂದರ್ಭಿಕ ಚಿತ್ರ (PTI)
ಬೆಂಗಳೂರು: ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಜ.15ನೇರಿಂದ ಮೊಬೈಲ್ ಕ್ಯೂಆರ್ ಆಧಾರಿತ 1 ದಿನ, 3 ದಿನ ಮತ್ತು 5 ದಿನಗಳ ಅನಿಯಮಿತ ಪ್ರಯಾಣ ಪಾಸ್ಗಳನ್ನು ಪರಿಚಯಿಸಿದೆ.
ಇದುವರೆಗೆ ಅನಿಯಮಿತ ಪ್ರಯಾಣ ಪಾಸ್ಗಳು, ಕೇವಲ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ಗಳ ಮೂಲಕವೇ ಲಭ್ಯವಾಗುತ್ತಿದ್ದು, 50 ರೂ. ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಪಾಸ್ಗಳ ಪರಿಚಯದೊಂದಿಗೆ, ಕ್ಯೂಆರ್ ಪಾಸ್ಗಳು ಮೊಬೈಲ್ ಫೋನ್ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.
ಪಾಸ್ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು. ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ ಗೇಟ್ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ಒಂದು ದಿನದ ಕ್ಯೂಆರ್ ಪಾಸ್ಗೆ 250 ರೂ., ಮೂರು ದಿನದ ಕ್ಯೂಆರ್ ಪಾಸ್ಗೆ 550 ರೂ., ಐದು ದಿನಗಳ ಕ್ಯೂಆರ್ ಪಾಸ್ಗೆ 850 ರೂ. ದರ ನಿಗದಿ ಮಾಡಲಾಗಿದ್ದು, ಕ್ಯೂಆರ್ ಪಾಸ್ ಪಡೆದವರು ಪಾಸ್ ಎಷ್ಟು ದಿನಕ್ಕೆ ಪಡೆದಿರುತ್ತಾರೋ, ಅಷ್ಟು ದಿನ ಅನಿಯಮಿತ ಪ್ರಯಾಣ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.







