ಅನ್ಯಾಯಕ್ಕೆ ಒಳಗಾದವರಷ್ಟೇ ದುಖಿಃಸುವ ಸಂವೇದನಶೀಲತೆಯನ್ನು ಯುವ ಲೇಖಕರು ಬೆಳೆಸಿಕೊಳ್ಳಲಿ: ಬಾನು ಮುಷ್ತಾಕ್

ಬೆಂಗಳೂರು: ಅನ್ಯಾಯಕ್ಕೆ ಒಳಗಾದವರಷ್ಟೇ ದುಖಿಃಸುವ ಸಂವೇದನಶೀಲತೆಯನ್ನು ಯುವ ಲೇಖಕರು ಬೆಳೆಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಬರವಣಿಗೆಯಲ್ಲಿ ಬೆಳೆವಣಿಗೆ ಸಾಧ್ಯ ಎಂದು ಬೂಕರ್ ವಿಜೇತ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಇಲ್ಲಿನ ನಯನ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ‘ಬುಕರ್ ಬಾನು ಮುಷ್ತಾಕ್; ಉಪನ್ಯಾಸ-ಸಂವಾದ - ಅಭಿನಂದನೆ’ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.
ಯಾವಾಗ ಬರೆಯಬೇಕು ಎಂದು ನಿರ್ಧರಿಸಿದೆನೊ, ಆಗ ಉರ್ದುನಲ್ಲಿ ಬರಿಬೇಕಾ? ಕನ್ನಡದಲ್ಲಿ ಬರೀಬೇಕಾ ಎಂಬ ಪ್ರಶ್ನೆ ಎದುರಾಗಿತ್ತು. ಯಾವ ಸಂಸ್ಕೃತಿಕ ಹಿನ್ನೆಲೆಯಲ್ಲಿ ಬರೆಯಬೇಕು. ನನ್ನ ಓದುಗರು ಯಾರು ಎಂಬ ಪ್ರಶ್ನೆ ಕಾಡಿತ್ತು. ಇದನ್ನು ಬಂಡಾಯ ಸಾಹಿತ್ಯಗಳ ಶಿಬಿರಗಳ ಮೂಲಕ ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಹೀಗಾಗಿ ನನ್ನ ಮೊದಲ ಕಥೆಗಳು ಪ್ರಾಯೋಗಿಕವಾಗಿದ್ದವು ಎಂದು ಅವರು ವಿವರಿಸಿದರು.
ಉರ್ದು ಹಿನ್ನೆಲೆಯಿಂದ ಬಂದ ನನಗೆ ಕನ್ನಡದ ಓದು, ಕನ್ನಡ ಸಾಂಸ್ಕೃತಿಕ ಲೋಕದ ಪ್ರಭಾವದಿಂದಲೇ ಬದುಕು ರೂಪುಗೊಳ್ಳಲು ಸಾಧ್ಯವಾಯಿತು. ನಾನು ಉರ್ದು ಭಾಷೆಯನ್ನೇ ಓದಿದ್ದರೆ, ಬಹುಶಃ ನನ್ನ ವ್ಯಕ್ತಿತ್ವ ಈ ರೀತಿಯಲ್ಲಿ ರೂಪುಗೊಳ್ಳಲು ಸಾಧ್ಯ ಆಗುತ್ತಿರಲಿಲ್ಲ. ಜೊತೆಗೆ ಈ ರೀತಿಯ ಬರವಣಿಗೆಯೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕನ್ನಡದ ಓದುವಿಕೆ ನನ್ನ ಮೇಲೆ ಆಗಾಧ ಪರಿಣಾಮ ಬೀರಿತು ಎಂದು ಅವರು ಹೇಳಿದರು.
ಎಲ್ಲ ಗಡಿ ದಾಟಿ ಇಡೀ ಪ್ರಪಂಚದಾದ್ಯಂತ ಎಲ್ಲಿಲ್ಲಿ ಹೆಣ್ಣಿಗೆ ಅಸಮಾನತೆ ಇದೆಯೋ, ಪಿತೃಪ್ರಧಾನತೆ, ಹಿಂಸೆ ಕೌಟುಂಬಿಕ ಸಂಬಂಧದ ಭಾಗವಾಗಿದೆಯೋ ಅಲ್ಲೆಲ್ಲ ನಾನು ಬರೆದ ಕೃತಿ ಅನ್ವಯವಾಗುತ್ತಿತ್ತು. ಜ್ಯೂರಿಗಳು ಬೂಕರ್ ಗೆ ನನ್ನ ಕೃತಿ ಆಯ್ಕೆ ಮಾಡಲು ಇದು ಒಂದು ಕಾರಣವಾಗಿದೆ ಎಂದು ಬಾನು ಮುಷ್ತಾಕ್ ಹೇಳಿದರು.
ವಿಮರ್ಷಕಿ ಡಾ.ಎಂ.ಎಸ್. ಆಶಾದೇವಿ ಮಾತನಾಡಿ, ಬಾನು ಅವರಿಗೆ ಬಂದ ಬೂಕರ್ ಪ್ರಶಸ್ತಿಯು, ಹೆಣ್ಣನ್ನು ಕಟ್ಟಿಹಾಕಿ ಆಕೆಯ ಬೆಳವಣಿಗೆಯನ್ನು ಕುಗ್ಗಿಸುವ ಹಾಗೂ ಹೆಣ್ಣನ್ನು ದೇವಿಯ ಹೆಸರಲ್ಲಿ ಸೀಮಿತಗೊಳಿಸುವ ಇಬ್ಬರಿಗೂ ಕಪಾಳ ಮೋಕ್ಷವನ್ನು ಕೊಟ್ಟಿದೆ. ಸ್ವತಂತ್ರ ಚಿಂತನೆಗೆ ಈ ಪ್ರಶಸ್ತಿಯು ಪ್ರೇರಣೆಯಾಗಿದೆ ಎಂದು ಹೇಳಿದರು.
ವಿದ್ವಾಂಸ ಹಂಪ ನಾಗರಾಜಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ, ಪ್ರತಿಭಾ ನಂದಕುಮಾರ್, ಡಾ.ವಸುಂಧರಾ ಭೂಪತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ಸೇರಿ ಇತರರು ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿದರು. ಸಾಹಿತಿ ಜಿ.ಎನ್.ಮೋಹನ್, ವಿನಯ ಒಕ್ಕುಂದ ಸೇರಿದಂತೆ ಮತ್ತಿತರರು ಇದ್ದರು.







