ಬೆಂಗಳೂರು| ನಗರಾದ್ಯಂತ ಮೊಬೈಲ್ ಕಳ್ಳತನ ಪ್ರಕರಣ: 1949 ಮೊಬೈಲ್ ಫೋನ್‍ಗಳು ವಶ, 42 ಆರೋಪಿಗಳ ಬಂಧನ

ಬೆಂಗಳೂರು: ನಗರಾದ್ಯಂತ ಮೊಬೈಲ್ ಕಳ್ಳತನ, ಸುಲಿಗೆ ಮಾಡುತ್ತಿದ್ದ 42 ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ 3.2 ಕೋಟಿ ರೂ. ಮೌಲ್ಯದ 1949 ಮೊಬೈಲ್ ಫೋನ್‍ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ನಗರದ ಜನಸಂದಣಿ ಪ್ರದೇಶಗಳಲ್ಲಿ, ಬಸ್, ರೈಲ್ವೆ ನಿಲ್ದಾಣ, ದೇವಸ್ಥಾನಗಳ ಬಳಿ ಸಾರ್ವಜನಿಕರ ಮೊಬೈಲ್ ಫೋನ್‍ಗಳನ್ನು ಸರಣಿಯಾಗಿ ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದವರ ವಿರುದ್ಧದ 2025ರ ಜನವರಿಯಿಂದ ಅಕ್ಟೋಬರ್ ವರೆಗಿನ ಅವಧಿಯ ಪ್ರಕರಣಗಳ ತನಿಖೆ ನಡೆಸಿ ಒಟ್ಟಾರೆಯಾಗಿ 42 ಆರೋಪಿಗಳನ್ನು ಬಂಧಿಸಲಾಗಿದ್ದು, 3.2 ಕೋಟಿ ರೂ. ಮೌಲ್ಯದ 1949 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ವಿಭಾಗದಲ್ಲಿ 442 ಮೊಬೈಲ್ ಫೋನ್‍ಗಳು ಹಾಗೂ 6 ಆರೋಪಿಗಳು, ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ವಿಭಾಗದಲ್ಲಿ 894 ಮೊಬೈಲ್ ಫೋನ್‍ಗಳು, ಈಶಾನ್ಯ ವಿಭಾಗದಲ್ಲಿ 40 ಮೊಬೈಲ್ ಫೋನ್‍ಗಳು ಹಾಗೂ ಒಂದು ಕಾರು, ಪಶ್ಚಿಮ ವಿಭಾಗದಲ್ಲಿ 121 ಮೊಬೈಲ್ ಫೋನ್‍ಗಳು ಹಾಗೂ 5 ಆರೋಪಿಗಳು, ವೈಟ್‍ಫೀಲ್ಡ್ ವಿಭಾಗದಲ್ಲಿ 39 ಮೊಬೈಲ್ ಫೋನ್‍ಗಳು ಹಾಗೂ 3 ಆರೋಪಿಗಳು, ನೈಋತ್ಯ ವಿಭಾಗದಲ್ಲಿ 224 ಮೊಬೈಲ್ ಫೋನ್‍ಗಳು, ಪೂರ್ವ ವಿಭಾಗದಲ್ಲಿ 189 ಮೊಬೈಲ್ ಫೋನ್‍ಗಳು ಹಾಗೂ 28 ಆರೋಪಿಗಳು, ಆಗ್ನೇಯ ವಿಭಾಗದಲ್ಲಿ 20 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
894 ಫೋನ್‍ಗಳ ವಶಕ್ಕೆ ಪಡೆದ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್..!
ಕದ್ದು ಮಾರಾಟ ಮಾಡಲಾಗಿದ್ದ 894 ಮೊಬೈಲ್ ಫೋನ್‍ಗಳನ್ನು ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್(ಸಿಇಐಆರ್) ಪೋರ್ಟಲ್ ಸಹಾಯದೊಂದಿಗೆ ಬೆಂಗಳೂರಿನ ಇಂಟಿಗ್ರೇಟೆಡ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಿಭಾಗದ ಸಿಬ್ಬಂದಿಗಳು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಮಾರ್ಚ್ 2024ರಿಂದ ಇಲ್ಲಿಯವರೆಗೆ ಸಿಇಐಆರ್ ಪೋರ್ಟಲ್‍ನಲ್ಲಿ ನಮೂದಿಸಲ್ಪಟ್ಟಿದ್ದ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ(ಐಎಂಇಐ) ನಂಬರ್ ಗಳು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೊಬೈಲ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 894 ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳ ಪೈಕಿ 522 ಫೋನ್‍ಗಳನ್ನು ಮಾಲಕರಿಗೆ ಹಸ್ತಾಂತರಿಸಲಾಗಿದ್ದು, ಇನ್ನುಳಿದ 372 ಫೋನ್‍ಗಳ ವಾರಸುದಾರರು ಸೂಕ್ತ ದಾಖಲೆಗಳನ್ನು ಇಂಟಿಗ್ರೇಟೆಡ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ಗೆ ಸಲ್ಲಿಸಿ ವಾಪಸ್ ಪಡೆಯಬಹುದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







