ಝೀರೋ ಟ್ರಾಫಿಕ್ ತಪ್ಪಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಮೆಟ್ರೋ ಪ್ರಯಾಣ

ಬೆಂಗಳೂರು: ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರದ ಜನರ ಭೇಟಿಗೆ ಹೊರಟ ಸಿಎಂ ಡಿ.ಕೆ.ಶಿವಕುಮಾರ್ ಅವರು ಝೀರೋ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವಿಧಾನಸೌಧದಿಂದ ಕನಕಪುರ ರಸ್ತೆವರೆಗೂ ಮೆಟ್ರೋ ಮೂಲಕ ಪ್ರಯಾಣ ಬೆಳೆಸಿದರು.
ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಸಾರ್ವಜನಿಕರೊಂದಿಗೆ ಮಾತನಾಡಿ, ಹಸ್ತಲಾಘವ ಮಾಡಿದರು. ಪ್ರಯಾಣದ ವೇಳೆ ಸಿಎಂ ಸಾರ್ವಜನಿಕರ ಕುಶಲ ವಿಚಾರಿಸಿದರು. ಯುವಕ, ಯುವತಿಯರು ಸೇರಿದಂತೆ ಪ್ರಯಾಣಿಕರು ಸಿಎಂ ಜತೆ ಸೆಲ್ಫಿ ತೆಗೆದುಕೊಂಡರು.
ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, "ನನ್ನ ಕ್ಷೇತ್ರದ ಜನ ದೊಡ್ಡಆಲಳ್ಳಿಯಿಂದ ನನ್ನನ್ನು ಇಲ್ಲಿಯವರೆಗೆ ಕರೆತಂದಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಬೇಕು ಎಂದು ಕೇಳುತ್ತಿದ್ದರು. ಅದಕ್ಕೆ ನನ್ನ ಕ್ಷೇತ್ರ, ನನ್ನ ಜನತೆ ಭೇಟಿಯಾಗುತ್ತಿದ್ದೇನೆ" ಎಂದು ಹೇಳಿದರು.
"ನನ್ನ ಕ್ಷೇತ್ರದ ಜನತೆಯ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡುತ್ತೇನೆ. ನನ್ನ ಕ್ಷೇತ್ರದ ಜನತೆ ಎಂದೂ ತೊಂದರೆಕೊಟ್ಟವರಲ್ಲ. ಅವರವರ ಕೆಲಸ ನೋಡಿಕೊಂಡು ಹೋಗುತ್ತಿದ್ದಾರೆ. ನನ್ನ ಕ್ಷೇತ್ರದ ಜನಕ್ಕೆ ರಾಜಕೀಯ ತಿಳುವಳಿಕೆ, ಪ್ರಜ್ಞೆಯಿದೆ. ನನ್ನಿಂದ ಅಪೇಕ್ಷೆ ಮಾಡದೇ ಹೋದರೂ ನಾನು ಅವರ ಸೇವೆ ಮಾಡಬೇಕಿರುವುದು ನನ್ನ ಕರ್ತವ್ಯ" ಎಂದರು.
"ನನ್ನ ಜನರಿಗೆ ಕೃತಜ್ಞತೆ ಸಲ್ಲಿಸಬೇಕು. ಅವರ ಭಾವನೆ, ಶ್ರಮಕ್ಕೆ ತಕ್ಕ ಫಲ ಸಿಗಬೇಕು. ಸಾತನೂರು ಕ್ಷೇತ್ರ, ದೊಡ್ಡಾಲಹಳ್ಳಿ ಜಿಲ್ಲಾ ಪಂಚಾಯತಿ, ಕನಕಪುರದ ಜನ ನನ್ನ ಭೇಟಿ ಮಾಡಬೇಕು ಎಂದು ಹೇಳುತ್ತಿದ್ದರು. ಅವರಿಗೆ ಸಮಯ ನೀಡುವುದಕ್ಕೆ ಆಗಿರಲಿಲ್ಲ. ಯಾರೂ ಬೆಂಗಳೂರಿಗೆ ಬರಬೇಡಿ ಅಂತ ಮನವಿ ಮಾಡಿದ್ದೆ. ಆದ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ" ಎಂದರು.
"ನನ್ನ ಕ್ಷೇತ್ರದ ಜನ ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದಾರೆ.ಕಳೆದ 40 ವರ್ಷಗಳಿಂದ ಬೆಳೆಸಿದ್ದಾರೆ ಮೊದಲು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರೋದು ನನ್ನ ಕರ್ತವ್ಯ. ಅದಕ್ಕೆ ಎಲ್ಲಾ ಕೆಲಸ ಮುಗಿಸಿ ಜನರ ಭೇಟಿಗೆ ಹೋಗುತ್ತಿದ್ದೇನೆ" ಎಂದು ಹೇಳಿದರು.
ಕನಕಪುರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ಸರ್ಕಲ್, ತುಂಗಣಿ, ಟಿ.ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ, ಹೊಸ ದುರ್ಗಾ, ಹೂಕುಂದ, ಮುಳ್ಳಳ್ಳಿ, ನಳ್ಳಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್, ಸೋಮದ್ಯಾಪನಹಳ್ಳಿ, ಹಳ್ಳಿ ಮಾರನ ಹಳ್ಳಿ, ಹಳೇ ಪೊಲೀಸ್ ಠಾಣೆ ಸರ್ಕಲ್, ಕನಕಪುರ ನಗರ, ಚನಬಸಪ್ಪನ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಡಿ.ಕೆ.ಶಿವಕುಮಾರ್ ರೋಡ್ ಶೋ ಹಾಗೂ ಜನ ಸಂಪರ್ಕ ಸಭೆಗಳನ್ನು ನಡೆಸಿದರು.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲು ಜನ ಸಾಗರವೇ ನೆರೆದಿತ್ತು. ಮುಖ್ಯಮಂತ್ರಿಯ ಭೇಟಿ ಹಿನ್ನೆಲೆಯಲ್ಲಿ ಬ್ಯಾನರ್‍ಗಳು ರಾರಾಜಿಸುತ್ತಿದ್ದವು.






