ದೇಶಕ್ಕೆ ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಪ್ರಜಾಸತ್ತಾತ್ಮಕ ಗಣರಾಜ್ಯ ನೀಡಿರುವುದು ಕಾಂಗ್ರೆಸ್: ಡಿ.ಕೆ. ಶಿವಕುಮಾರ್

Photo source: X/@DKShivakumar
ಬೆಂಗಳೂರು: ದೇಶಕ್ಕೆ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ನೀಡಿರುವುದು ಕಾಂಗ್ರೆಸ್ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾನೊಬ್ಬ ಕಾಂಗ್ರೆಸಿಗ, ಭಾರತೀಯ, ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಭವ್ಯ ಮತ್ತು ಸಾಮರಸ್ಯದ ಭಾರತವನ್ನು ಕಟ್ಟೋಣ. ಸಂವಿಧಾನದ ತತ್ವಗಳನ್ನು ಜಾರಿಗೆ ತರುವುದೇ ನಮ್ಮೆಲ್ಲರ ಧರ್ಮ. ಇದನ್ನು ಕಾಂಗ್ರೆಸ್ಸಿಗರು ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು.
ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣವೇ ಸಂವಿಧಾನ ಹಾಗೂ ಸರಕಾರದ ಆಶಯವಾಗಿದೆ. ಸಂವಿಧಾನವೇ ನಮ್ಮ ಧರ್ಮ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ. ಎಲ್ಲಾ ಗಣಗಳಿಗೆ ಆ ಕೈಲಾಸದ ಶಿವ ಅಧಿಪತಿಯಾದರೆ, ನಮ್ಮ ದೇಶದ ಗಣತಂತ್ರ ವ್ಯವಸ್ಥೆಗೆ ಪವಿತ್ರ ಸಂವಿಧಾನವೇ ಅಧಿಪತಿ. ಉಸಿರಾಡಲು ಗಾಳಿ ಬೇಕು, ನಮ್ಮ ದೇಶ ನಡೆಸಲು ಸಂವಿಧಾನ ಬೇಕು. ನಾವು ಸಂವಿಧಾನವನ್ನು ಉಳಿಸಿದರೆ ಭಾರತವನ್ನು ಉಳಿಸಿದಂತಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇವನಾರವ, ಇವನಾರವ ಎನ್ನುವ ಭೇದ-ಭಾವ ಅಳಿಸಿ, ಇವ ನಮ್ಮವ, ಇವ ನಮ್ಮವ ಎನ್ನುವ ಭಾವನೆ ಮೂಡಿಸಿದ್ದೇ ಸಂವಿಧಾನ. ಗಣರಾಜ್ಯೋತ್ಸವ ಎಂದರೆ ಭಾರತದ ಸ್ವಾಭಿಮಾನದ ದಿನ. ಜನವರಿ 26ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ದಿನ. ಭಾರತದ ಒಕ್ಕೂಟ ವ್ಯವಸ್ಥೆಯು ಜಾರಿಯಾದ ದಿನವಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸ್ವಾತಂತ್ರ್ಯ ನಂತರ ಈ ದೇಶದ 570ಕ್ಕೂ ಹೆಚ್ಚು ಪ್ರದೇಶಗಳು ರಾಜರ ಆಡಳಿತಕ್ಕೆ ಒಳಪಟ್ಟಿದ್ದವು. ಇದೆಲ್ಲವನ್ನು ಒಗ್ಗೂಡಿಸಿ ಈ ದೇಶವನ್ನು ಒಂದು ಮಾಡಲಾಯಿತು. ಭಾರತವು ರಾಜ್ಯಗಳ ಒಕ್ಕೂಟ ಎಂಬುದನ್ನು ಸಂವಿಧಾನದ 1ನೇ ವಿಧಿಯು ಹೇಳುತ್ತದೆ. ಸಂವಿಧಾನದ ಪ್ರತಿ ಪುಟದಲ್ಲೂ ಜನಪರ ವಿಚಾರಗಳು ಇವೆ. ಜಾತಿ, ಧರ್ಮ, ಸಂಪತ್ತು, ಅಧಿಕಾರ ಯಾವುದೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಸಂವಿಧಾನ ಹೇಳುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
75 ವರ್ಷಗಳ ಹಿಂದೆ ಬಡತನ, ಅನಕ್ಷರತೆ, ಹಸಿವು, ಅಪೌಷ್ಟಿಕತೆ ಸಮಸ್ಯೆಗಳು ದೇಶವನ್ನು ಬಹಳವಾಗಿ ಕಾಡಿತ್ತು. ಆದರೆ, ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ನಮ್ಮ ಪಕ್ಷ ಹಾಗೂ ಸರಕಾರ ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಕಲ್ಪಿಸಿದೆ. ಹಿಂದೆ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಸಂವಿಧಾನದ ಅಂಶಗಳ ಸಮರ್ಪಕ ಜಾರಿಯಿಂದ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗುವ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಸಲು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಚಯಿಸುವ ಗುರಿ ನಮ್ಮದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಮ್ಮ ಆಡಳಿತದ ‘ಕರ್ನಾಟಕ ಮಾದರಿ’ ಬಗ್ಗೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಅನೇಕ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳು ಬದುಕಿನ ಗ್ಯಾರಂಟಿ ಹೆಚ್ಚಿಸಿವೆ. ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಶೇ.89ರಷ್ಟು ಫಲಾನುಭವಿಗಳ ಕುಟುಂಬ ಸುಧಾರಣೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಇದೇ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.
‘ಇತ್ತೀಚೆಗೆ ಕೆಲವು ದೇಶದ್ರೋಹಿಗಳು ಸಂವಿಧಾನ ಬದಲಾವಣೆಯ ಕೂಗು ಎತ್ತಿದ್ದಾರೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಇದಕ್ಕೆ ನಾನೂ ದನಿಗೂಡಿಸುತ್ತೇನೆ. ಸಂವಿಧಾನಕ್ಕೆ ಗೌರವ ಕೊಟ್ಟವನು ನಿಜವಾದ ದೇಶಭಕ್ತ. ಸಂವಿಧಾನಕ್ಕೆ ಅಗೌರವ ತೋರಿಸುವವರು ದೇಶದ್ರೋಹಿಗಳು’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ







