ಬೆಂಗಳೂರು| ಕಾರಿನ ಮಿರರ್ ಗೆ ತಾಗಿದ್ದಕ್ಕೆ ಕಾರಿನಿಂದ ಗುದ್ದಿಸಿ ಬೈಕ್ ಸವಾರನ ಹತ್ಯೆ: ದಂಪತಿ ಬಂಧನ

Screengrab:X/@prajwaldza
ಬೆಂಗಳೂರು: ಕಾರಿನ ಮಿರರ್ ಗೆ ಹೊಡೆದು ಹೋದರೆಂಬ ಕಾರಣಕ್ಕೆ ದ್ವಿಚಕ್ರ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಕಾರಿನಿಂದ ಗುದ್ದಿಸಿ ಯುವಕನ ಹತ್ಯೆ ಮಾಡಿದ ಆರೋಪದಡಿ ದಂಪತಿಯನ್ನು ಇಲ್ಲಿನ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಮ್ ತರಬೇತುದಾರನಾಗಿರುವ ಮನೋಜ್ ಕುಮಾರ್ ಹಾಗೂ ಆತನ ಪತ್ನಿ ಆರತಿ ಶರ್ಮಾ ಬಂಧಿತರು ಎಂದು ಗುರುತಿಸಲಾಗಿದೆ.
ಅಕ್ಟೋಬರ್ 25ರಂದು ರಾತ್ರಿ ಬೆಂಗಳೂರಿನ ಜೆ.ಪಿ.ನಗರ 7ನೇ ಹಂತದ ಶ್ರೀರಾಮ ಲೇಔಟ್ ಬಳಿ ಕಾರಿನಿಂದ ಗುದ್ದಿಸಿದ್ದ ಆರೋಪಿಗಳು, ದ್ವಿಚಕ್ರ ವಾಹನ ದರ್ಶನ್(24)ನ ಸಾವಿಗೆ ಕಾರಣರಾಗಿದ್ದರು. ಮತ್ತೋರ್ವ ಸವಾರ ವರುಣ್(24) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಕಾರಿನ ಮಿರರ್ ಗೆ ಹೊಡೆದು ಹೋದರು ಎಂಬ ಕಾರಣಕ್ಕೆ ಕೋಪಗೊಂಡು ಸುಮಾರು 2 ಕಿ.ಮೀ.ವರೆಗೆ ಹಿಂಬಾಸಿಕೊಂಡು ಹೋಗಿ ಈ ದಂಪತಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದರು. ಕಾರು ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ರಸ್ತೆಯಲ್ಲಿ ಹಾರಿ ಬಿದ್ದಿದ್ದಾರೆ. ದ್ವಿಚಕ್ರ ವಾಹನಲ್ಲಿದ್ದ ದರ್ಶನ್ ಮತ್ತು ವರುಣ್ಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ದರ್ಶನ್ ಮೃತಪಟ್ಟಿದ್ದ.
ಈ ಸಂಬಂಧ ಮೊದಲು ಜೆ.ಪಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಎಂದು ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಕೊಲೆ ಎಂದು ಪತ್ತೆಯಾಗಿದೆ. ಘಟನೆ ಬಳಿಕ ದಂಪತಿ ಕಾರಿನಲ್ಲಿ ಪರಾರಿಯಾಗಿದ್ದರು. ಘಟನೆಯಾದ ಕೆಲ ಸಮಯದ ನಂತರ ವಾಪಸ್ ಸ್ಥಳಕ್ಕೆ ದಂಪತಿ ಬಂದಿದ್ದರು. ಕಾರಿನ ಕೆಲ ಬಿಡಿಭಾಗಗಳು ನೆಲಕ್ಕೆ ಬಿದ್ದಿದ್ದವು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಸಾಕ್ಷಿ ನಾಶ ಮಾಡುವ ಕೆಲಸ ಮಾಡಿದ್ದರು. ಸದ್ಯ ಕೊಲೆ, ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
In suspected road rage incident, Kalaripayattu instructor Manoj Kumar, 34, & wife Arathi Sharma, 30, arrested by Puttenahalli police for alleged murder of Dinesh, 24, over minor damage to their car’s mirror. Death was initially perceived to be due to road accident. @DeccanHerald pic.twitter.com/mr20ejUfnU
— Prajwal D'Souza (@prajwaldza) October 29, 2025







