ಸಿಎಂ ಸೂಚನೆ ಬೆನ್ನಲ್ಲೇ ಕಾರ್ಯಾಚರಣೆ: ಯಶವಂತಪುರದ ಎಪಿಎಂಸಿಯಲ್ಲಿ 19 ಬಾಲ ಕಾರ್ಮಿಕರ ರಕ್ಷಣೆ
ಅಂಗಡಿ ಮಾಲಕರ ವಿರುದ್ಧ 9 ಪ್ರಕರಣ ದಾಖಲು

ಬೆಂಗಳೂರು: ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಬಾಲಕರು ಸೇರಿದಂತೆ ಒಟ್ಟು 19 ಬಾಲ ಕಾರ್ಮಿಕರನ್ನು ಆರ್.ಎಂ.ಸಿ.ಯಾರ್ಡ್ ಪೊಲೀಸರು ರಕ್ಷಣೆ ಮಾಡಿದ್ದು, ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಅಂಗಡಿ ಮಾಲಕರ ವಿರುದ್ಧ ಒಟ್ಟು 9 ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ಮಾಡಿ ರೈತರು, ಕಾರ್ಮಿಕರು ಹಾಗೂ ವರ್ತಕರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿಗಳಲ್ಲಿ ಬಾಲಕರನ್ನು ಕೆಲಸಕ್ಕೆ ಇಟ್ಟುಕೊಂಡಿರುವುದನ್ನು ತಿಳಿದು, ಕೂಡಲೇ ಪರಿಶೀಲನೆ ನಡೆಸಿ ಕ್ರಮಕ್ಕೆ ಸಿಎಂ ಸೂಚನೆ ನೀಡಿದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲು ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ 5 ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.
ವಿಶೇಷ ತಂಡಗಳು ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ಬಿಹಾರದ 13, ಪಶ್ಚಿಮ ಬಂಗಾಳದ 2, ಉತ್ತರ ಪ್ರದೇಶದ 2, ರಾಜಸ್ಥಾನ ಹಾಗೂ ಕರ್ನಾಟಕದ ತಲಾ ಒಬ್ಬ ಬಾಲಕ ಸೇರಿದಂತೆ ಒಟ್ಟು 19 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಅಂಗಡಿ ಮಾಲಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ 4 ಪ್ರಕರಣಗಳು ಹಾಗೂ ಬಾಲ ಮತ್ತು ಹದಿಹರೆಯದ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಅಡಿಯಲ್ಲಿ 5 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದಲ್ಲದೆ ಬೀದಿ ಬದಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಕ್ಕಳನ್ನು ರಕ್ಷಣೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ’
-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ
ಸಿಎಂ ಆರೋಗ್ಯದಲ್ಲಿ ಏರುಪೇರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡಿದೆ. ಮಂಗಳವಾರ ಬೆಳಗ್ಗೆಯಿಂದ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಹಲವು ಕಡೆ ಸುತ್ತಾಡಿದ್ದಾರೆ. ಬಳಿಕ ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿದೆ. ಕೂಡಲೇ ವೈದ್ಯರನ್ನು ಕರೆಯಿಸಿ ತಕ್ಷಣ ತಪಾಸಣೆ ಮಾಡಿಸಲಾಗಿದ್ದು, ವೈದ್ಯರ ತಪಾಸಣೆ ಮತ್ತು ವಿಶ್ರಾಂತಿಯ ಬಳಿಕ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದು ಬಂದಿದೆ.






