ಮೈಸೂರು ದಸರಾ ಉದ್ಘಾಟನೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನಗೆ ಅವಕಾಶ ನೀಡಿ: ಸಿಎಂಗೆ ದಿನೇಶ್ ಗೂಳಿಗೌಡ ಮನವಿ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕರ್ನಾಟಕದ ಹೆಮ್ಮೆಯ ಸುಪುತ್ರಿ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಆಹ್ವಾನಿಸಬೇಕೆಂದು ವಿಧಾನ ಪರಿಷತ್ ಶಾಸಕ ಹಾಗೂ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಗ್ರ ಮನವಿ ಪತ್ರ ಸಲ್ಲಿಸಿದ್ದಾರೆ.
ಮೈಸೂರು ದಸರಾ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಅತಾರಾಷ್ಟ್ರೀಯ ಉತ್ಸವವಾಗಿದ್ದು, ನಾಡಿನ ಕೀರ್ತಿಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದ ಗಣ್ಯರಿಂದ ಉದ್ಘಾಟನೆ ಮಾಡಿಸುತ್ತಾ ಬರಲಾಗುತ್ತಿದೆ. 2027ರ ಸೆಪ್ಟೆಂಬರ್ 25ರಂದು ಭಾರತದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ದೇಶದ ನ್ಯಾಯಾಂಗ ಇತಿಹಾಸದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಲಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಯ್ಕೆ ಮಾಡುವುದು ಅತ್ಯಂತ ಅರ್ಥಪೂರ್ಣ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆ ಮೂಲದವರಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದಿವಂಗತ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿಯಾಗಿದ್ದಾರೆ. ತಂದೆಯ ಬಳಿಕ ಮಗಳೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗುತ್ತಿರುವುದು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲೇ ಪ್ರಪ್ರಥಮ ಹಾಗೂ ಅತ್ಯಂತ ಅಪರೂಪದ ದಾಖಲೆಯಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸುಪ್ರೀಂ ಕೋರ್ಟ್‌ನ 'ಕೋರ್ಟ್ಸ್ ಆಫ್ ಇಂಡಿಯಾ' ಪುಸ್ತಕ ರಚನೆ ಹಾಗೂ ಅದರ ಕನ್ನಡ ಅನುವಾದದ ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾಗಿಯೂ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಹಲವು ಜನಪರ ಹಾಗೂ ಐತಿಹಾಸಿಕ ತೀರ್ಪುಗಳ ಮೂಲಕ ಗುರುತಿಸಿಕೊಂಡಿರುವ ನಾಗರತ್ನ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದರಿಂದ ಮಹಿಳಾ ಸಬಲೀಕರಣಕ್ಕೆ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು ದೇಶಕ್ಕೆ ಒಂದು ಗಟ್ಟಿಯಾದ ಸಂದೇಶ ನೀಡಿದಂತಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನ್ಯಾಯಾಂಗ ಕ್ಷೇತ್ರದ ಈ ಧೀಮಂತ ವ್ಯಕ್ತಿತ್ವ ನೀಡುವ ಸಂದೇಶವು ನಾಡಹಬ್ಬದ ಘನತೆ ಹಾಗೂ ಮೆರುಗನ್ನು ಇಮ್ಮಡಿಗೊಳಿಸಲಿದೆ. ಆದ್ದರಿಂದ ಅವರ ಅಪರಿಮಿತ ಸೇವೆ ಮತ್ತು ಕೊಡುಗೆಯನ್ನು ಗೌರವಿಸಿ ಉದ್ಘಾಟಕರನ್ನಾಗಿ ಆಹ್ವಾನಿಸಬೇಕೆಂದು ದಿನೇಶ್ ಗೂಳಿಗೌಡ ಮನವಿಯಲ್ಲಿ ಕೋರಿದ್ದಾರೆ.






