‘ನರೇಗಾ ಬಚಾವೋ ಸಂಗ್ರಾಮ’ ಕಾರ್ಯಕ್ರಮ; ಜ.8ಕ್ಕೆ ಕಾಂಗ್ರೆಸ್ ಶಾಸಕರ ಸಭೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕನ್ನು ರಕ್ಷಿಸಲು ರಾಷ್ಟ್ರವ್ಯಾಪಿ ‘ನರೇಗಾ ಬಚಾವೋ ಸಂಗ್ರಾಮ’ ಕಾರ್ಯಕ್ರಮ ಆಯೋಜಿಸುವ ಸಲುವಾಗಿ ಎಐಸಿಸಿ ಸೂಚನೆಯ ಮೇರೆಗೆ ಜ.8ರಂದು ಸಂಜೆ 6 ಗಂಟೆಗೆ ಲಲಿತ್ ಅಶೋಕ ಹೋಟೆಲ್‍ನಲ್ಲಿ ಶಾಸಕರ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಯುಪಿಎ ಕೇಂದ್ರ ಸರಕಾರವು 2005ರಲ್ಲಿ ಜಾರಿಗೆ ತಂದಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಭಾಗದ ಕಾರ್ಮಿಕ ವರ್ಗಕ್ಕೆ ಜೀವನದ ಆಸರೆಯಾಗಿತ್ತು. ಇಂತಹ ಮಹತ್ತರವಾದ ಜನಪಯೋಗಿ ಕಾರ್ಯಕ್ರಮದ ಹೆಸರನ್ನು ಬದಲಾಯಿಸಿ, ಅದರ ಮೂಲ ಹಕ್ಕು, ಸೌಕರ್ಯ ಹಾಗೂ ಉದ್ದೇಶಗಳನ್ನೇ ಬದಲಾಯಿಸಿ ಗ್ರಾಮೀಣ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಆರೋಪಿಸಿದ್ದಾರೆ.
ನರೇಗಾ ಕಾಯ್ದೆಯ ಮೂಲ ರೂಪವನ್ನು ಮರುಸ್ಥಾಪಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ “ನರೇಗಾ ಬಚಾವೋ ಸಂಗ್ರಾಮ” ಎಂಬ ಜನಪರ ಚಳವಳಿಯನ್ನು ರಾಷ್ಟ್ರವ್ಯಾಪಿ ಪ್ರಾರಂಭಿಸಲು ಎಐಸಿಸಿ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆ ನರೇಗಾ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಜ.8ರಂದು ಸಂಜೆ 6 ಗಂಟೆಗೆ ಲಲಿತ್ ಅಶೋಕ ಹೋಟೆಲ್‍ನಲ್ಲಿ ಎಲ್ಲ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.







