ಚರ್ಚಿಸದೆ ನಾಗೇಂದ್ರ ರಾಜೀನಾಮೆ ಕೇಳುವುದು ತರವಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಸದನದ ನಿಯಮಾನುಸಾರ ಚರ್ಚೆಗೆ ನೋಟಿಸ್ ನೀಡಬೇಕು. ಚರ್ಚೆ ಮಾಡದೇ ರಾಜೀನಾಮೆ ಕೇಳುವುದು ತರವಲ್ಲ. ಎರಡು ದಿನಗಳು ಚರ್ಚೆ ಮಾಡೋಣ. ಆದರೂ ಮನವರಿಕೆಯಾಗದಿದ್ದರೆ ಹೋರಾಟ ಮುಂದುವರೆಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಐದು ದಿನಗಳಿಂದ ವಿರೋಧ ಪಕ್ಷ ನಡೆಸುತ್ತಿರುವ ಪ್ರತಿಭಟನೆ ಸಂಬಂಧ ಶುಕ್ರವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಸದನದಲ್ಲಿ ಪ್ರತಿಭಟಿಸಲು ಒಂದು ನಿಯಮವಿದೆ. ಅದನ್ನು ಪಾಲನೆ ಮಾಡಬೇಕು ಎಂದರು.
ನಾಗೇಂದ್ರ ವಿರುದ್ಧ ಈ ಹಿಂದೆ ಆರೋಪ ಕೇಳಿಬಂದಾಗ ಅವರಿಂದ ರಾಜೀನಾಮೆ ಕೊಡಿಸಿದ್ದೆ. ಈಗ ಮತ್ತೆ ಯಾಕೆ ಸಂಪುಟಕ್ಕೆ ಅವರನ್ನು ಸೇರ್ಪಡೆಗೊಳಿಸಿದೆವು ಎಂಬುದನ್ನು ತಿಳಿಸುತ್ತೇನೆ. ಅದಕ್ಕೆ ನಿಯಾನುಸಾರ ನೋಟಿಸ್ ನೀಡಿ, ಎರಡು ದಿನಗಳ ಕಾಲ ಚರ್ಚೆ ಮಾಡಿ, ಆದಾಗ್ಯೂ ಮನವರಿಕೆಯಾಗದಿದ್ದರೆ ಹೋರಾಟ ಮಾಡಿ ಎಂದ ಸಿಎಂ ಹೇಳಿದರು.
ಇದಕ್ಕೆ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಎನ್.ರವಿಕುಮಾರ್, ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಸದನದಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ದ್ವಂದ್ವ ಯಾಕೆ? ಚರ್ಚಿಸುವಂತಹದ್ದು ಏನೂ ಇಲ್ಲ. ರಾಜೀನಾಮೆ ಕೊಡಿಸಿ ಎಂದು ಒತ್ತಾಯಿಸಿದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಗೇಂದ್ರ ಅವರನ್ನು ವೈಯಕ್ತಿಕವಾಗಿ ವಿರೋಧಿಸುತ್ತಿಲ್ಲ. ಪ್ರಕರಣದಲ್ಲಿ ಮಾತ್ರ ಅವರಿಗೆ ಜಾಮೀನು ಸಿಕ್ಕಿದೆಯಷ್ಟೇ. ಆರೋಪ ಮುಕ್ತರಾಗಿ ಹೊರಬಂದಿಲ್ಲ. ಕ್ಲೀನ್ ಚಿಟ್ ನೀಡಿರುವ ಎಸ್‍ಐಟಿ ಕಾರ್ಯವೈಖರಿ ಎಲ್ಲರಿಗೂ ತಿಳಿದಿದೆ. ವಾಲ್ಮೀಕಿ ಸಮುದಾಯದ ಇನ್ನೂ ಮೂವರನ್ನು ಮಂತ್ರಿ ಮಾಡಿ. ಅಭ್ಯಂತರವಿಲ್ಲ, ಕಳಂಕಿತ ಸಚಿವನನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಸರಿಯಲ್ಲ. ಮೊದಲು ಅವರನ್ನು ರಾಜೀನಾಮೆ ಕೊಡಿಸಿ ಎಂದು ಪಟ್ಟು ಹಿಡಿದರು.
ಈ ವೇಳೆ, ಆಡಳಿತ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ಆರೋಪ-ಪ್ರತ್ಯಾರೋಪ ಹೆಚ್ಚಾಗಿದ್ದರಿಂದ ಸಭಾಪತಿ ಸಲೀಂ ಅಹ್ಮದ್ ಸದನವನ್ನು ಮುಂದೂಡಿದರು.
ಸರಿಯಾಗಿ ಕಲಾಪ ನಡೆಯುತ್ತಿಲ್ಲ: ಸಲೀಂ ಅಹ್ಮದ್ ಅಸಮಾಧಾನ
ಶುಕ್ರವಾರ ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಸಲೀಂ ಅಹ್ಮದ್ ಮಾತನಾಡಿ, ಐದು ದಿನಗಳಿಂದ ಸರಿಯಾಗಿ ಕಲಾಪ ನಡೆಯುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ವಿಪಕ್ಷಗಳಿಗೆ ಮನವಿ ಮಾಡಿದರು.
ಈ ವೇಳೆ, ಸಭಾಪತಿ ಮಾತಿಗೆ ಧ್ವನಿಗೂಡಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ಸಚಿವ ನಾಗೇಂದ್ರ ರಾಜೀನಾಮೆ ಒತ್ತಾಯ ಸಂಬಂಧ ಸದನದಲ್ಲಿ ಚರ್ಚೆ ಮಾಡದೆ ಪ್ರತಿಭಟನೆ ಮಾಡುವುದು ಸರಿಯಲ್ಲ. ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ರೀತಿ ಮಾಡಿರುವುದು ಸರಿಯಲ್ಲ ಎಂದರು.
ಪ್ರತಿಭಟನೆ ಹಿಂಪಡೆಯದ ಕಾರಣ ಗದ್ದಲದ ಮಧ್ಯೆ ಪ್ರಶ್ನೋತ್ತರ ಕಲಾಪಕ್ಕೆ ನಡೆಯಿತು. ಬಡವರ ಹಣ ಗೋವಿಂದ.. ಗೋವಿಂದ ಎಂದು ಘೋಷಣೆ ಜೊತೆಗೆ ಅಣುಕು ಗೀತೆ ಹಾಡುವ ಮೂಲಕ ಸರಕಾರದ ವಿರುದ್ಧ ವಿಪಕ್ಷಗಳು ಒತ್ತಡ ಹೇರಿದವು.






