ಕೇಂದ್ರ ಸರಕಾರ ಕರ್ನಾಟಕದ ಅನುದಾನ ಹಂಚಿಕೆ ಪಾಲು ನೀಡಲಿ : ಡಿ.ಕೆ.ಶಿವಕುಮಾರ್
► ರಾಜ್ಯದಲ್ಲಿ 2ನೇ ಬೆಂಗಳೂರು ನಿರ್ಮಿಸುವ ಕುರಿತು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ : ಡಾ.ಅಶೋಕ್ ಕುಮಾರ್ ಲಾಹಿರಿ ► ನೀತಿ ಆಯೋಗದ ಉಪಾಧ್ಯಕ್ಷರೊಂದಿಗೆ ಸಭೆ

ಬೆಂಗಳೂರು : ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ ಈ ಹಿಂದೆ ಘೋಷಿಸಿದ್ದ ಅನುದಾನ ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನ ಹಂಚಿಕೆಯ ಪಾಲನ್ನು ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀತಿ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾ ದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಡಾ.ಅಶೋಕ್ ಕುಮಾರ್ ಲಾಹಿರಿ ಅವರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರ ಸರಕಾರ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆಯಿದೆ. ಬಹಳ ದಿನಗಳ ಬಳಿಕ ನೀತಿ ಆಯೋಗದೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುವ ಅವಕಾಶ ಲಭಿಸಿದೆ. ನೀತಿ ಆಯೋಗ ರಾಜ್ಯಕ್ಕೆ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ದೇಶ ಕರ್ನಾಟಕದ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದು, ಪ್ರಧಾನಿ ಅವರು ಸಹ ತಮ್ಮ ಮಾತಿನಲ್ಲಿ ಇದನ್ನು ತಿಳಿಸಿದ್ದಾರೆ. ನೀತಿ ಆಯೋಗ ಎರಡನೆ ಬೆಂಗಳೂರು ಸ್ಥಾಪಿಸುವ ಬಗ್ಗೆ ಸಲಹೆ ನೀಡಿದ್ದಾರೆ. ನೀತಿ ಆಯೋಗದ ನಿರೀಕ್ಷೆಯಂತೆ ಸಮರ್ಪಕವಾದ ಯೋಜನೆ ರೂಪಿಸಲಾಗುವುದು. ಬೇರೆ ರಾಜ್ಯಗಳು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಲಾಗುವುದು. ದೇಶದ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬ ಬಗ್ಗೆ ವ್ಯಾಪಕವಾದ ಯೋಜನೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ನೀತಿ ಆಯೋಗ ನೀಡಿರುವ ಎಲ್ಲಾ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚಿಗೆ ದೇಶದ ಗೃಹ ಸಚಿವರೊಂದಿಗೆ ಚರ್ಚೆ ವೇಳೆ, ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿವೆ. ಆದರೆ ಉತ್ತರದ ರಾಜ್ಯಗಳು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಂಡು ಅನುದಾನದಲ್ಲಿ ಪಾಲನ್ನು ನಿಗದಿಪಡಿಸುವ ಮೂಲಕ ದಕ್ಷಿಣದ ರಾಜ್ಯಗಳನ್ನು ಶಿಕ್ಷಿಸುವ ಪರಿಸ್ಥಿತಿ ಬರಬಾರದು ಎಂದು ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಜಿಡಿಪಿ, ತಲಾದಾಯ, ಮಾನವ ಸಂಪನ್ಮೂಲ ಸೂಚ್ಯಂಕ, ತಾಂತ್ರಿಕತೆ ಮತ್ತು ಆವಿಷ್ಠಾರ, ನೇರ ವಿದೇಶಿ ಬಂಡವಾಳ ಹೂಡಿಕೆ, ರಫ್ತು, ಸ್ಟಾರ್ಟ್ ಅಪ್, ಮಾಹಿತಿ ತಂತ್ರಜ್ಞಾನ ಸೇವೆ ಸೂಚ್ಯಂಕಗಳಲ್ಲಿ ದೇಶದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ದೇಶದಲ್ಲಿಯೇ ಅತ್ಯಂತ ಗುಣಮಟ್ಟದ ಮಾನವ ಸಂಪನ್ಮೂಲ ಕರ್ನಾಟಕದಲ್ಲಿದೆ. ಕರ್ನಾಟಕ ಪ್ರತಿ ವರ್ಷ 1.6 ಲಕ್ಷ ಇಂಜಿನಿಯರ್ ಗಳು ಮತ್ತು ಸುಮಾರು 13 ಸಾವಿರ ವೈದ್ಯರನ್ನು ರೂಪಿಸುತ್ತಿದೆ. 26 ಲಕ್ಷ ಐಟಿ ವೃತ್ತಿಪರರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನ ಜನಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ದೇಶದ ಎಲ್ಲ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಎಲ್ಲ ಅಂಶಗಳು ಬೆಂಗಳೂರಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಬೆಂಗಳೂರಿನ ಮೂಲಸೌಕರ್ಯಗಳನ್ನು ಉತ್ತಮಪಡಿಸಲು ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿದ್ದು, ಅನುμಷ್ಠಾನದ ಹಂತದಲ್ಲಿವೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
‘ಮತ್ತೊಂದು ಬೆಂಗಳೂರು ನಿರ್ಮಾಣ’
‘ದೇಶದಲ್ಲಿ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಹೆಮ್ಮೆಯಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕರ್ನಾಟಕದಲ್ಲಿ ಎರಡನೆ ಬೆಂಗಳೂರು ನಿರ್ಮಿಸುವ ಕುರಿತು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅಶೋಕ್ ಕುಮಾರ್ ಲಾಹಿರಿ ಹೇಳಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ವೇಗವಾಗಿ ಬೆಳೆಯುವ ಎಲ್ಲ ಸಾಮಥ್ರ್ಯ ಹೊಂದಿದೆ. ರಾಜ್ಯಗಳು ಬೆಳೆದರೆ ಮಾತ್ರ ದೇಶ ಬೆಳೆಯಲು, ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಕರ್ನಾಟಕದಲ್ಲಿ ಒಣಭೂಮಿಯ ಪ್ರಮಾಣ ಹೆಚ್ಚಾಗಿದ್ದು, ಒಣಭೂಮಿಯಲ್ಲಿ ಹೆಚ್ಚಿನ ಉತ್ಪನ್ನ ಬೆಳೆಸಲು ಯೋಜನೆ ರೂಪಿಸಬೇಕಾಗಿದೆ ಎಂದರು.






