ಬ್ಯಾಲೆಟ್ ಪೇಪರ್‌ನಲ್ಲಿಯೇ ಸ್ಥಳೀಯ ಸಂಸ್ಥೆ ಚುನಾವಣೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಇದೇ ವಾರ್ಷಿಕ ಸಾಲಿನ ನವೆಂಬರ್, ಡಿಸೆಂಬರ್ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆಯನ್ನು ಬ್ಯಾಲೆಟ್ ಪೇಪರ್(ಮತಪತ್ರ)ನಲ್ಲಿಯೇ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಲಿಷ್ಠ ಚುನಾವಣಾ ವ್ಯವಸ್ಥೆಗೆ ನಾವು ಹೋರಾಟ ಮಾಡುತ್ತಿದ್ದೇವೆ. ಪ್ರತಿ ಹಳ್ಳಿಗೂ ಎಸ್‍ಐಆರ್ ವಿರೋಧಿ ಹೋರಾಟ ತಲುಪಿಸಲಾಗುವುದು.ಜತೆಗೆ, ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸುತ್ತೇವ ಎಂದರು.
ಕಾಂಗ್ರೆಸ್ ಪಕ್ಷ ಸಂವಿಧಾನದ ಮೂಲಕ ದೇಶದ ಪ್ರಜೆಗಳಿಗೆ ಅತಿದೊಡ್ಡ ಅವಕಾಶ ನೀಡಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಸೇರಿದಂತೆ ಅನೇಕ ಕೊಡುಗೆಗಳನ್ನು ನಾವು ಈ ದೇಶಕ್ಕೆ ನೀಡಿದ್ದೇವೆ. ಇಡೀ ಪ್ರಪಂಚ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನೋಡಿ ಅನುಕರಿಸಿದೆ. ಆದರೆ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದ ನಮ್ಮ ಇಡೀ ಮಾದರಿ ವ್ಯವಸ್ಥೆ ಮೇಲೆ ಅನೇಕ ರಾಷ್ಟ್ರಗಳು ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ ಎಂದು ಅವರು ತಿಳಿಸಿದರು.




