ಕರಾವಳಿಯಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿಗೆ ಉತ್ತೇಜನ : ಡಿ.ಕೆ.ಶಿವಕುಮಾರ್
ʼಅಷ್ಟಮಿದ ಐಸಿರಿʼ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು : ಕರಾವಳಿ ಮತ್ತು ಮಲೆನಾಡಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು, ಬ್ಯಾಂಕ್ ಸಾಲ ತೀರುವಳಿ ಅವಧಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ತಿಳಿಸಿದರು.
ರವಿವಾರ ವಿಜಯನಗರದಲ್ಲಿ 'ತುಳುನಾಡ ಜವನೆರ್ ಸಂಘಟನೆ' ಆಯೋಜಿಸಿದ್ದ ಅಷ್ಟಮಿದ ಐಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
"ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಮೂಲಸೌಕರ್ಯಗಳ ನಿರ್ವಹಣೆ ವೆಚ್ಚವೂ ಸಹಜವಾಗಿಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ನೆರವು ನೀಡುವ ಉದ್ದೇಶದಿಂದ ಬ್ಯಾಂಕು ಸಾಲ ತೀರುವಳಿ ಅವಧಿಯನ್ನು ಹೆಚ್ಚಿಸಲಾಗುವುದು" ಎಂದು ಅವರು ಹೇಳಿದರು.
"ದಕ್ಷಿಣ ಕನ್ನಡ ಜಿಲ್ಲೆ ಜ್ಞಾನ, ಉತ್ತಮವಾದ ಪರಿಸರ, ವಿಶಾಲವಾದ ಕಡಲ ತೀರವನ್ನು ಹೊಂದಿದ್ದು, ವ್ಯಾಪಾರ ವಹಿವಾಟು, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಪವಿತ್ರವಾದ ನೆಲವನ್ನು ಉಳಿಸಿ ಅದನ್ನು ಅಭಿವೃದ್ಧಿಪಡಿಸುವ ಆರ್ಕಿಟೆಕ್ಟ್ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸರ್ಕಾರ ನಿಮ್ಮ ಜತೆಯಲ್ಲಿಯೇ ಇದೆ. ನನಗೆ ರಾಜಕಾರಣ ಮುಖ್ಯವಲ್ಲ. ಉಪಕಾರ ಸ್ಮರಣೆ ನಿಮಗೆ ಬಿಟ್ಟು ಬಿಡುತ್ತೇನೆ. ನನಗೆ ಅದರ ಅವಶ್ಯಕತೆಯಿಲ್ಲ" ಎಂದರು.
"ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆಯನ್ನು ನಡೆಸಿ ಹಲವಾರು ಐತಿಹಾಸಿಕ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಸಚಿವ ಸಂಪುಟದ ಎಲ್ಲಾ ತೀರ್ಮಾನಗಳಿಗೆ ಈಗಾಗಲೇ ಸಹಿ ಮಾಡಿದ್ದು, ಸಧ್ಯದಲ್ಲಿಯೇ ಈ ಎಲ್ಲಾ ತೀರ್ಮಾನಗಳ ಸರ್ಕಾರಿ ಆದೇಶ ಹೊರಡಿಸಿ ಎಲ್ಲ ಘೋಷಣೆಗಳನ್ನು ಜಾರಿಗೊಳಿಸಲಾಗುವುದು" ಎಂದು ಅವರು ಹೇಳಿದರು.
ಹೊಸ ಪ್ರವಾಸೋದ್ಯಮ ನೀತಿ
ಮೂರು ಜಿಲ್ಲೆಗಳನ್ನು ವ್ಯಾಪಿಸಿರುವ ನಮ್ಮ ಕರಾವಳಿ ತೀರ 320 ಕಿಮೀ ವಿಸ್ತಾರವಾಗಿದ್ದು, ಪಕ್ಕದಲ್ಲಿಯೇ ಇರುವ ಮಲೆನಾಡ ಜಿಲ್ಲೆಗಳು ಸಂಪತ್ಭರಿತವಾಗಿವೆ. ಈ ಜಿಲ್ಲೆಗಳಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಹೊಸ ಪ್ರವಾಸೋದ್ಯಮ ನೀತಿಗೆ ಅನುಮೋದನೆ ನೀಡಿದ್ದೇವೆ. ಈ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವವರ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಂದುಗೂಡಿಸಿ ಸಧ್ಯದಲ್ಲಿಯೇ ಸಮಾಲೋಚನಾ ಸಭೆಯನ್ನು ನಡೆಸಲಾಗುವುದು" ಎಂದು ತಿಳಿಸಿದರು.
"ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಕೇರಳ ಮಾದರಿಯಲ್ಲಿ ವಾಟರ್ ಮೆಟ್ರೋ ಸೌಲಭ್ಯ ಆರಂಭಿಸಲು ಅನುಮೋದನೆ ನೀಡಿದ್ದೇವೆ. ಇನ್ನು ಮುಂದೆ ಬಸ್ ನಲ್ಲಿ ಸಂಚರಿಸುವ ರೀತಿಯಲ್ಲೇ, ವಾಟರ್ ಮೆಟ್ರೋದಲ್ಲಿಯೂ ಸಂಚರಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಬಂದರುಗಳ ನಿರ್ಮಾಣಕ್ಕೆ ಈಗಾಗಲೇ ನಾನು ಆದೇಶ ನೀಡಿದ್ದೇನೆ. ಟೀಕೆಗಳೆಲ್ಲಾ ಸಾಯುತ್ತವೆ, ಮಾಡಿದ ಕೆಲಸ ಮಾತ್ರ ಉಳಿಯುತ್ತದೆ. ಈ ತತ್ವದಲ್ಲಿ ಮಾತ್ರ ನನಗೆ ನಂಬಿಕೆಯಿದೆ" ಎಂದರು.






