ನೀರು ಇದ್ದರೆ ಖಂಡಿತವಾಗಿ ತಮಿಳುನಾಡಿಗೆ ಕೊಡುತ್ತೇವೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಪ್ರಸ್ತುತ ನಮ್ಮ ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಒಂದು ವೇಳೆ ನಮ್ಮಲ್ಲಿ ನೀರಿದ್ದರೆ ಖಂಡಿತವಾಗಿಯೂ ತಮಿಳುನಾಡಿಗೆ ನೀರು ನೀಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀರಿದ್ದರೆ ಖಂಡಿತವಾಗಿಯೂ ತಮಿಳುನಾಡಿಗೆ ನೀರು ನೀಡುತ್ತೇವೆ. ಆದರೆ, ಪ್ರಸ್ತುತ ನಮ್ಮ ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ರಾಜ್ಯದ ಹಿತಾಸಕ್ತಿ ಹಾಗೂ ರೈತರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದರು.
ನಮ್ಮ ರೈತರಿಗೆ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇನೆ. ಈ ವರ್ಷ ಕಾವೇರಿಗೆ ಬಾಗಿನ ಅರ್ಪಿಸಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಎಷ್ಟು ನೀರಿದೆ ಎಂಬ ವಾಸ್ತವಾಂಶ ತಮಿಳುನಾಡಿನವರಿಗೂ, ನಮಗೂ ಹಾಗೂ ಇಡೀ ಜಗತ್ತಿಗೂ ಗೊತ್ತಿದೆ. ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡಿನ ಅರ್ಜಿ ವಜಾಗೊಂಡಿರುವುದು ವಾಸ್ತವಾಂಶವಾಗಿದೆ. ಈ ಸಂಬಂಧದ ನ್ಯಾಯಾಲಯದ ಆದೇಶದಲ್ಲಿರುವ ಅಂಶಗಳನ್ನು ನಮ್ಮ ಪಕ್ಷದ ಅಧ್ಯಕ್ಷರಿಗೂ ತಿಳಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಹಿರಿಯೂರು ಚುನಾವಣೆಯ ವಿಚಾರವಾಗಿ ಸಚಿವರೊಂದಿಗೆ ಸಭೆ ವಿಚಾರವಾಗಿ ಮಾಹಿತಿ ನೀಡಿದ ಅವರು, ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಹೊಸ ಮನೆಗೆ ;ಗಂಗಾ'ಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲರಿಗೂ ಊಟಕ್ಕೆ ಆಹ್ವಾನ ನೀಡಿದ್ದೆ. ನಿನ್ನೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ನಾನು ರಾಜ್ಯದ 224 ಶಾಸಕರಿಗೂ ಮುಖ್ಯಮಂತ್ರಿ. ಹೀಗಾಗಿ ಎಲ್ಲರನ್ನೂ ಆಹ್ವಾನಿಸಿದ್ದೆ ಎಂದು ತಿಳಿಸಿದರು.






