ಡಾ. ಆರತಿ ಕೃಷ್ಣ ಸೇರಿದಂತೆ ಮೂವರಿಗೆ ‘ಜೀವನ್ಮುಖಿʼ ಪ್ರಶಸ್ತಿ

ಬೆಂಗಳೂರು: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ‘ಜೀವನ್ಮುಖಿ’ ಕನ್ನಡ ಪಾಕ್ಷಿಕ ಪತ್ರಿಕೆಯು ನೀಡುತ್ತಿರುವ 2026ನೇ ಸಾಲಿನ ʼಜೀವನ್ಮುಖಿ ಪ್ರಶಸ್ತಿ’ ಪುರಸ್ಕಾರಕ್ಕೆ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎ.ದಯಾನಂದ, ಬೆಂ.ಪಶ್ಚಿಮ ವಿಭಾಗ ಡಿಸಿಪಿ ಎನ್.ಯತೀಶ್, ಸಾಹಿತಿ ನಂ.ನಂಜಪ್ಪ ರಾಜಣ್ಣ ಆಯ್ಕೆಯಾಗಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಟಿ.ಸುರೇಶ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಶಸ್ತಿಯು 5 ಸಾವಿರ ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಜೂ.7ರ ಸಂಜೆ 4 ಗಂಟೆಗೆ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಉದ್ಘಾಟನೆ ಮಾಡಲಿದ್ದು, ಜಾನಪದ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ತಿಮ್ಮೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ವೇಳೆ ನಾಡಿನ ಪ್ರತಿಭಾವಂತ ಬಾಲ ಪ್ರತಿಭೆಗಳಾದ ಕ್ಷಮ ಯು. ಐತಾಳ್, ಚಿರಂತ್ ಎಸ್., ಶಿವಾನಿ ಬಿ., ಖುಷಿ ಪ್ರದೀಪ್, ಹಾಸಿನಿ ಪಿ.ಗೌಡ, ರಂಜಿತಾ ಬಿ.ಎನ್, ಎಚ್.ಎಸ್. ದೀಪ್ತಿ ಪ್ರಿಯಾ ಸೇರಿದಂತೆ ಹಲವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಗುವುದು ಎಂದು ಸುರೇಶ್ ಮಾಹಿತಿ ನೀಡಿದ್ದಾರೆ.




