ಆರೋಗ್ಯ ಸೇವೆಯಲ್ಲಿ ಇತಿಹಾಸ ಸೃಷ್ಟಿಸಿದ ಡಾ.ರಮಣ ರಾವ್ ಮಾದರಿ : ಡಾ.ಜಿ.ಪರಮೇಶ್ವರ್

ಬೆಂಗಳೂರು : ವೈದ್ಯಕೀಯ ಸೇವೆಯ ಮೂಲಕ ವಿಶ್ವದ ಗಮನ ಸೆಳೆದಿರುವ ಡಾ.ರಮಣರಾವ್ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಹಲವು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸಿ, ಪ್ರತಿ ರವಿವಾರ ನಿರಂತರವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿವಾರ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಡಾ.ಬಿ.ರಮಣರಾವ್ ಅವರ ‘ಹಳ್ಳಿ ಕ್ಲಿನಿಕ್’ನಲ್ಲಿ ನಡೆದ ಗಿನ್ನೀಸ್ ಬುಕ್ ರೆಕಾರ್ಡ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ರಮಣರಾವ್ ಅವರು 1972ರಿಂದಲೂ ಸಲ್ಲಿಸುತ್ತಿರುವ ವೈದ್ಯಕೀಯ ಸೇವೆಯನ್ನು ಗುರುತಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಗೌರವಿಸಿರುವುದು ಹೆಮ್ಮೆಯ ಸಂಗತಿ. 2,777 ರವಿವಾರ ಸುಮಾರು 33ಲಕ್ಷಕ್ಕೂ ಅಧಿಕ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇಂತಹ ಅಪರೂಪದ ಸೇವಾ ಮನೋಭಾವ ಎಲ್ಲರಲ್ಲೂ ಮೂಡುವುದಿಲ್ಲ ಎಂದರು.
ರಮಣರಾವ್‌ರ ಸೇವಾ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನ್ನ ಸಂತಸ ತಂದಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ ಆರೋಗ್ಯ ಕೇಂದ್ರಗಳಿದ್ದು, ಸಾವಿರಾರು ವೈದ್ಯರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬ ವೈದ್ಯರೂ ರಮಣರಾವ್ ಅವರ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ರಿಷಿನಾಥ್, ಡಾ. ಬಿ. ರಮಣರಾವ್, ಪತ್ನಿ ಹೇಮಾ ರಮಣರಾವ್, ಡಾ.ಶರೀತ್ ಭೋಗರಾಜ್, ಡಾ.ಶಾಂತಿನಿ, ಡಾ.ಅಭಿಜಿತ್ ಭೋಗರಾಜ್, ಡಾ.ಜಾಹ್ನವಿ, ಇನ್ನಿತರರು ಹಾಜರಿದ್ದರು.






