ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ; 8 ಮಂದಿ ವಿದೇಶಿ ಡ್ರಗ್ಸ್ ಪೆಡ್ಲರ್, 39 ಮಂದಿ ಆರೋಪಿಗಳ ಬಂಧನ

ಬೆಂಗಳೂರು : ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದ್ದು, ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಹಾಗೂ ನಗರ ಪೊಲೀಸರು, 8 ಮಂದಿ ವಿದೇಶಿ ಡ್ರಗ್ಸ್ ಪೆಡ್ಲರ್, 21 ಹೊರ ರಾಜ್ಯದ ಹಾಗೂ 10 ಸ್ಥಳೀಯ ವ್ಯಕ್ತಿಗಳು ಸೇರಿದಂತೆ ಒಟ್ಟು 39 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 28.07 ಕೋಟಿ ರೂ. ಮೌಲ್ಯದ 200 ಕೆಜಿಗೂ ಅಧಿಕ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಅಮೃತಹಳ್ಳಿ, ಗಿರಿನಗರ, ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಠಾಣಾ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ, ಆರೋಪಿಗಳಿಂದ ನಿಷೇಧಿತ ಮಾದಕ ವಸ್ತುಗಳಾದ 21.64 ಕೆಜಿ ಎಂಡಿಎಂಎ, 738 ಗ್ರಾಂ ಕೋಕೇನ್, 4.49 ಕೆಜಿ ಗ್ರಾಂ ಹೈಡೋಗಾಂಜಾ, 184.62 ಕೆಜಿ ಗಾಂಜಾ, 1.65 ಕೆಜಿ ಅಫೀಮು, 25 ಗ್ರಾಂ ಮಾರ್ಫಿನ್, 17 ಲಕ್ಷ ರೂ. ನಗದು, 22 ಮೊಬೈಲ್ ಫೋನ್‍ಗಳು ಹಾಗೂ 5 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಆರಂಭಿಕ ಮೌಲ್ಯ 28.07 ಕೋಟಿ ರೂ. ಆಗಿದ್ದು, ಮಾರುಕಟ್ಟೆ ಮೌಲ್ಯವು 55.80 ಕೋಟಿ ರೂ.ಗೆ ಏರಿಕೆಯಾಗಲಿದೆ.
ಹೊಸದಿಲ್ಲಿಯಲ್ಲಿ ಮಾದಕವಸ್ತು ತಯಾರಿಸಿ, ರಾಜ್ಯದ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ, ಆಮ್ನೀ ಸಿಂಗ್ ಮತ್ತು ನೈಜೀರಿಯಾದ ಓಬಮ್ ಎಂಬ ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, 14.44 ಕೋಟಿ ರೂ. ಮೌಲ್ಯದ 14.43 ಕೆ.ಜಿ. ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಗಿರಿನಗರ ಪೊಲೀಸರು 5.18 ಕೋಟಿ ಮೌಲ್ಯದ 5.179 ಕೆ.ಜಿ. ಎಂಡಿಎಂಎ, 1 ಮೊಬೈಲ್, ಸಿಸಿಬಿಯಿಂದ 4.44 ಕೋಟಿ ರೂ.ಮೌಲ್ಯದ 738 ಗ್ರಾಂ ಕೋಕೇನ್, 336 ಗ್ರಾಂ ಎಂಡಿಎಂಎ, 82.305 ಕೆ.ಜಿ. ಗಾಂಜಾ, 2 ದ್ವಿಚಕ್ರ ವಾಹನ, 3 ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.
ಕೆಐಎ ಪೊಲೀಸರು 1.5 ಕೋಟಿ ರೂ. ಮೌಲ್ಯದ 4.27 ಕೆ.ಜಿ. ಹೈಡ್ರೋ ಗಾಂಜಾ, ಯಶವಂತಪುರ 82.72 ಲಕ್ಷ ರೂ.ಮೌಲ್ಯದ 650 ಗ್ರಾಂ ಎಂಡಿಎಂಎ, 41.446 ಕೆ.ಜಿ. ಗಾಂಜಾ, 1 ದ್ವಿಚಕ್ರ ವಾಹನ, 3 ಮೊಬೈಲ್, ಯಲಹಂಕ 79.40 ಲಕ್ಷ ರೂ. ಮೌಲ್ಯದ 794 ಗ್ರಾಂ ಎಂಡಿಎಂಎ, 2 ಮೊಬೈಲ್ ಜಪ್ತಿ ಮಾಡಿದ್ದಾರೆ. ಹೆಬ್ಬಾಳ ಪೊಲೀಸರು 9.60 ಲಕ್ಷ ಮೌಲ್ಯದ 96 ಗ್ರಾಂ ಎಂಡಿಎಂಎ, 17 ಲಕ್ಷ ರೂ. ನಗದು, 2 ಮೊಬೈಲ್ ಜಪ್ತಿ ಮಾಡಿದ್ದರೆ, ನಂದಿನಿ ಲೇಔಟ್ ಪೊಲೀಸರು 15 ಲಕ್ಷ ಮೌಲ್ಯದ 150 ಗ್ರಾಂ ಎಂಡಿಎಂಎ, 8 ಮೊಬೈಲ್, ಒಂದು ದ್ವಿಚಕ್ರ ವಾಹನ, ಕಾಡುಗೋಡಿ ಪೊಲೀಸರು 7.90 ಲಕ್ಷ ರೂ. ಮೌಲ್ಯದ 15.80 ಕೆ.ಜಿ ಗಾಂಜಾ, ಮಲ್ಲೇ ಶ್ವರಂ ಪೊಲೀಸರು 7.53 ಲಕ್ಷ ರೂ. ಮೌಲ್ಯದ 215 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಗೋವಿಂದಪುರ ಪೊಲೀಸರು 5.64 ಲಕ್ಷ ರೂ. ಮೌಲ್ಯದ 11.27 ಕೆ.ಜಿ ಗಾಂಜಾ, ಬಾಗಲೂರು ಪೊಲೀಸರು 5.39 ಲಕ್ಷ ರೂ. ಮೌಲ್ಯದ 25 ಗ್ರಾಂ ಮಫಿನ್ಸ್ ಹಾಗೂ 5.780 ಕೆ.ಜಿ, ಮಹದೇವಪುರ 5.29 ಲಕ್ಷ ರೂ. ಮೌಲ್ಯದ 10.57 ಕೆ.ಜಿ ಗಾಂಜಾ, ಮಹಾಲಕ್ಷ್ಮಿಲೇಔಟ್‍ನಲ್ಲಿ 5.33 ಲಕ್ಷ ರೂ. ಮೌಲ್ಯದ 1.65 ಕೆ.ಜಿ ಅಫೀಮು, ಒಂದು ದ್ವಿಚಕ್ರ ವಾಹನ, 2 ಮೊಬೈಲ್, ಬೇಗೂರು 5 ಕ್ಷರೂ. ಮೌಲ್ಯದ 10 ಕೆಜಿ ಗಾಂಜಾ, ಕೊತ್ತನೂರು ಪೊಲೀಸರು 7.44 ಲಕ್ಷ ರೂ. ಮೌಲ್ಯದ 7.44 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ವಿದೇಶ, ಹೊರ ರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಈ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳು ಪ್ರಗತಿಯಲ್ಲಿವೆ.
-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ






