ಬೆಂಗಳೂರಿಗೆ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಭೇಟಿ, ಪರಿಶೀಲನೆ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಹಣವನ್ನು ಜಪ್ತಿ ಮಾಡಿದ ಬೆನ್ನಲ್ಲೇ ಈ.ಡಿ.ಯ ಹಿರಿಯ ಅಧಿಕಾರಿಗಳ ನೇತೃತ್ವದ ತಾಂತ್ರಿಕ ಸಮಿತಿಯ ತಂಡ ನಗರಕ್ಕೆ ಆಗಮಿಸಿದೆ. ತಂಡದ ಸದಸ್ಯರು ಎರಡು ದಿನಗಳ ಕಾಲ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ವಲಯದ ಇಡಿ ಘಟಕದಲ್ಲಿ ದಾಖಲಾಗಿರುವ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಯಲಿದೆ. ಸತೀಶ್ ಜಾರಕಿಹೊಳಿ ಅವರಿಂದ ವಿದೇಶದಲ್ಲಿ ಹಣ ಹೂಡಿಕೆ ಪ್ರಕರಣ, ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ, ಲೋಕೋಪಯೋಗಿ ಇಲಾಖೆಯ ಅವ್ಯವಹಾರ, ಕೆಪಿಎಸ್ಸಿ ಹಗರಣ, ಮೂಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಈ.ಡಿ.ಯಿಂದ ತನಿಖೆ ನಡೆಯುತ್ತಿದೆ. ಈ ಎಲ್ಲ ಪ್ರಕರಣಗಳ ಕುರಿತು ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲಿನ ದಾಳಿ ವೇಳೆ ಪತ್ತೆಯಾದ 3.3 ಕೋಟಿ ರೂಪಾಯಿ ನಗದು ಮತ್ತು ವಿದೇಶಿ ಕರೆನ್ಸಿಯ ಕುರಿತು ಯಾವುದೇ ಕ್ಷಣದಲ್ಲಿ ಇಡಿಯಿಂದ ನೋಟಿಸ್ ರವಾನೆಯಾಗುವ ಸಾಧ್ಯತೆಯಿದೆ. ಸದ್ಯ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಅಗತ್ಯವಿದ್ದಲ್ಲಿ ನೋಟಿಸ್ ನೀಡಲಾಗುವುದು ಎಂದು ವರದಿಯಾಗಿದೆ.




