ಜಾಹೀರಾತು ವೀಕ್ಷಣೆ ಮೂಲಕ ಹಣ ಗಳಿಕೆ ಪ್ರಕರಣ; ಈ.ಡಿ.ಯಿಂದ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Photo Credit ; PTI
ಬೆಂಗಳೂರು : ಜಾಹೀರಾತುಗಳನ್ನು ವೀಕ್ಷಿಸುವ ಮೂಲಕ ಹಣ ಗಳಿಸಬಹುದು ಎಂದು ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ‘ಝಾ ಲೈಫ್ಸ್ಟೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನ ನಿರ್ದೇಶಕರು ಸಹಿತ ಮೂವರು ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಈ.ಡಿ.) ವಿಶೇಷ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ‘ಝಾ ಲೈಫ್ಸ್ಟೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನ ನಿರ್ದೇಶಕರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಅಡಿಯಲ್ಲಿ ದಾಖಲಾದ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ.
ಸಂಸ್ಥೆಯು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು ಮತ್ತು ಸದಸ್ಯರನ್ನು ನೋಂದಾಯಿಸಲು ಒಂದು ವ್ಯವಸ್ಥಿತವಾದ, ಸದಸ್ಯತ್ವ-ಆಧಾರಿತ ಮಾದರಿಯನ್ನು ಅಳವಡಿಸಿಕೊಂಡಿತ್ತು. ಅಲ್ಲದೆ ವಾಟ್ಸ್ಆ್ಯಪ್ ಮತ್ತು ಇತರ ಆನ್ಲೈನ್ ಸಂವಹನ ಮಾಧ್ಯಮಗಳ ಮೂಲಕ ವ್ಯಕ್ತಿಗಳನ್ನು ಸಂಪರ್ಕಿಸಿ, ಅವರಿಗೆ ಕಂಪನಿಯ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಜಾಹೀರಾತು ವೀಕ್ಷಣಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗುತ್ತಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಆಸಕ್ತ ವ್ಯಕ್ತಿಗಳಿಗೆ ಕಂಪೆನಿಯ ವೆಬ್ ಪ್ಲಾಟ್ಫಾರ್ಮ್ ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಲು ಲಿಂಕ್ ನೀಡಲಾಗುತ್ತಿತ್ತು ಮತ್ತು ಅಲ್ಲಿ ಅವರು ಲಾಗಿನ್ ವಿವರಗಳನ್ನು ರಚಿಸಿಕೊಳ್ಳಬೇಕಿತ್ತು. ತದನಂತರ, ಶಾಶ್ವತ ಸದಸ್ಯತ್ವವನ್ನು ಪಡೆಯಲು ಮತ್ತು ಕಂಪೆನಿಯ ಆದಾಯ ಗಳಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವ ಸಲುವಾಗಿ, ಸದಸ್ಯರು ಸಂಸ್ಥೆಯ ಬ್ಯಾಂಕ್ ಖಾತೆಗೆ 1,109 ರೂ. ಪಾವತಿಸಬೇಕಿತ್ತು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಈ ರೀತಿ ಸಂಸ್ಥೆಯು 2020ರ ಡಿ.6ರಿಂದ 2021ರ ಜೂ.4ರ ಅವಧಿಯಲ್ಲಿ ಸಾರ್ವಜನಿಕರಿಂದ ಸುಮಾರು 4.29 ಕೋಟಿ ರೂ. ಸಂಗ್ರಹಿಸಿದೆ. ಆದರೆ ಜಾಹೀರಾತುಗಳನ್ನು ವೀಕ್ಷಿಸುವ ಮೂಲಕ ಹಣ ಗಳಿಸುವ ಅಂತಹ ಯಾವುದೇ ಸೌಲಭ್ಯವನ್ನು ಕಂಪೆನಿಯು ಒದಗಿಸಿರಲಿಲ್ಲ. ಆದರೆ ಸಂಗ್ರಹಿಸಿದ ಹಣವನ್ನು ಕಂಪೆನಿಯ ನಿರ್ದೇಶಕರು ತಮ್ಮ ವೈಯಕ್ತಿಕ ವೆಚ್ಚಗಳು ಅಥವಾ ಲಾಭಗಳಿಗಾಗಿ ಬಳಸಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ಈಗಾಗಲೇ ‘ಝಾಲೈಫ್ಸ್ಟೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳಲ್ಲಿ 3,70,65,355 ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.






