ಬೆಂಗಳೂರು ನಗರದಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ

ಬೆಂಗಳೂರು: ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಮೀಲಾದುನ್ನಬಿ ಅಂಗವಾಗಿ ಬುಧವಾರ ರಾಜಧಾನಿ ಬೆಂಗಳೂರಿನಲ್ಲಿ ಮುಸ್ಲಿಮ್ ಸಮುದಾಯದಿಂದ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರದ ವಿವಿಧ ಮಸೀದಿಗಳು, ದರ್ಗಾ ಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಪ್ರವಚನ, ಮೀಲಾದ್ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಕೂಟಗಳನ್ನು ಆಯೋಜಿಸಲಾಗಿತ್ತು. ಪ್ರವಾದಿಯವರ ಜೀವನ, ಮಾನವೀಯತೆ, ಕರುಣೆ, ಸಹನೆ, ಶಾಂತಿ ಮತ್ತು ಸೌಹಾರ್ದದ ಸಂದೇಶಗಳನ್ನು ಸಾರುವ ಸ್ತಬ್ಧ ಚಿತ್ರಗಳು, ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಮುಸ್ಲಿಮರು ಮೆರವಣಿಗೆಗಳನ್ನು ನಡೆಸಿದರು.
ಇಲ್ಲಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನ, ಟ್ಯಾನರಿ ರಸ್ತೆಯ ಹಝ್ರತ್ ಬಿಲಾಲ್ ಮಸೀದಿ, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿ, ಫ್ರೆಜರ್ ಟೌನ್‍ನಲ್ಲಿರುವ ಸರ್ ಇಸ್ಮಾಯಿಲ್ ಸೇಠ್ ಮಸೀದಿ, ಅಕ್ಕಿಪೇಟೆಯ ಹಝ್ರತ್ ತವಕ್ಕಲ್ ಮಸ್ತಾನ್ ದರ್ಗಾ, ಕಬ್ಬನ್ ಪೇಟೆಯ ಹಝ್ರತ್ ಹಮೀದ್ ಶಾ ಹಾಗೂ ಮುಹೀಬ್ ಶಾ ಖಾದ್ರಿ ದರ್ಗಾ ಸೇರಿದಂತೆ ವಿವಿಧಡೆ ವಿಶೇಷ ಪ್ರಾರ್ಥನೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ವತಿಯಿಂದ ಮತ್ತಿಕೆರೆಯ ಜೆ.ಪಿ.ಪಾರ್ಕ್‍ನಲ್ಲಿಸೀರತ್ ಅಭಿಯಾನ, ಜುಲೂಸೆ ಮುಹಮ್ಮದೀಯಾ ಸಂಘಟನೆ ವತಿಯಿಂದ ನಗರದ ವೈಎಂಸಿಎ ಮೈದಾನದಲ್ಲಿ ಮೀಲಾದ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಸ್ಲಿಮ್ ಬಾಂಧವರು ಮೆರವಣಿಗೆ ಮೂಲಕ ನೀಲಸಂದ್ರ, ಗೋರಿಪಾಳ್ಯ, ಚಾಮರಾಜಪೇಟೆ, ಕೆ.ಆರ್.ಪುರ, ವರ್ತೂರು, ಮಡಿವಾಳ, ಆರ್.ಟಿ.ನಗರ, ಹೆಬ್ಬಾಳ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದರು.
ಸಂಚಾರ ವ್ಯವಸ್ಥೆ:
ಈದ್ ಮೀಲಾದ್ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮೆರವಣಿಗೆಗಳು ನಡೆದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸರು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಹಾಗೂ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ಜಾರಿಗೊಳಿಸಿದ್ದರು.
ಮಧ್ಯಾಹ್ನದಿಂದ ರಾತ್ರಿ 11ರ ವರೆಗೆ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚನೆಗಳನ್ನು ನೀಡಿದ್ದರು. ಹಲವೆಡೆ ಕಾರ್ಯಕ್ರಮದ ಆಯೋಜಕರು, ಸ್ವಯಂ ಸೇವಕರನ್ನು ನೇಮಕ ಮಾಡಿ, ಪೊಲೀಸರಿಗೆ ನೆರವು ನೀಡಿದರು.
‘ಈದ್ ಮೀಲಾದ್ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಪರಸ್ಪರ ಗೌರವ ಹಾಗೂ ಸಹಬಾಳ್ವೆಯನ್ನು ಬಲಪಡಿಸುವ ಸಂದರ್ಭವಾಗಲಿ’ ಎಂಬ ಆಶಯವನ್ನು ವಿವಿಧ ಧಾರ್ಮಿಕ ಮುಖಂಡರು ವ್ಯಕ್ತಪಡಿಸಿದ್ದಾರೆ.






