ಬೆಂಗಳೂರು |ಕೆ.ಆರ್. ಮಾರ್ಕೆಟ್ನಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಮತ್ತಿಬ್ಬರು ಸೆರೆ

Photo credit: indiatoday.in
ಬೆಂಗಳೂರು: ನಗರದ ಕೆಆರ್ ಮಾರ್ಕೆಟ್ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಜಿಲೆಟಿನ್, ಡಿಟೊನೇಟರ್ ಸ್ಫೋಟಕ ಪತ್ತೆಯಾದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ಶಿವಕುಮಾರ್ ಹಾಗೂ ನವೀನ್ ಎಂಬುವರನ್ನು ಬಂಧಿಸಲಾಗಿದ್ದು, ಆ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾದಂತಾಗಿದೆ. ಜು.23ರ ಮಧ್ಯಾಹ್ನ ಕಲಾಸಿಪಾಳ್ಯದ ಶೌಚಾಲಯದ ಬಳಿ ಜಿಲೆಟಿನ್, ಡಿಟೊನೇಟರ್ ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದ ಪೊಲೀಸರು ಗಣೇಶ್, ಶಿವ ಹಾಗೂ ಮುನಿಯಪ್ಪ ಎಂಬವರನ್ನು ಬಂಧಿಸಿದ್ದರು. ಆನಂತರ ಇವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಶಿವಕುಮಾರ್ ಹಾಗೂ ನವೀನ್ ಸಿಕ್ಕಿಬಿದ್ದಿದ್ದಾರೆ.
ಕೋಲಾರದಿಂದ ಜಿಲೆಟಿನ್, ಡಿಟೊನೇಟರ್ ಗಳು ಮತ್ತಿತರ ಸ್ಫೋಟಕ ಸಾಮಗ್ರಿಗಳನ್ನು ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕವೇ ಸಾಗಿಸುತ್ತಿದ್ದ ಆರೋಪಿಗಳು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕ್ವಾರಿ, ಬೋರ್ವೆಲ್ ಕಾಮಗಾರಿಗಳಿಗೆ ಅಗತ್ಯವಿರುವ ಕಡೆಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಬಂಧಿತ ಆರೋಪಿಗಳು ಈ ಹಿಂದೆಯೂ ಹಲವು ಕಡೆಗಳಲ್ಲಿ ಜಿಲೆಟಿನ್, ಡಿಟೊನೇಟರ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 22 ಜೀವಂತ (ಆರ್ ಇಎಕ್ಸ್-90) ಜಿಲೆಟಿನ್ ಕಡ್ಡಿಗಳು ಹಾಗೂ 30 ಎಲೆಕ್ಟ್ರಿಕ್ ಡಿಟೊನೇಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







