ಕಬ್ಬಿಗೆ 3,600 ರೂ. ದರ ನಿಗದಿಗೆ ರೈತರ ಆಗ್ರಹ; ಬಂಕಾಪುರ ಟೋಲ್ ಬಂದ್ ಮಾಡಿ ಧರಣಿ

ಹಾವೇರಿ : ಕಬ್ಬಿಗೆ ಪ್ರತಿ ಟನ್ಗೆ 3,600 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಬುಧವಾರ ಜಿಲ್ಲೆಯ ಬಂಕಾಪುರ ಟೋಲ್ಗೇಟ್ ಬಂದ್ ಮಾಡಿ ಧರಣಿ ನಡೆಸಿದರು.
ಹಾವೇರಿಯ ಇಜಾರಿಲಕಮಾಪುರದ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆ ಎದುರು ನ.18ರಂದು ಅಹೋರಾತ್ರಿ ಧರಣಿ ನಡೆಸಲು ರೈತರು ಕರೆ ನೀಡಿದ್ದರು. ಆದರೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಸಚಿವರ ಮನೆಯ ಸುತ್ತ 250 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (ಸೆಕ್ಷನ್ 163) ಜಾರಿ ಮಾಡಿ, ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿತ್ತು.ಸಚಿವರ ಮನೆಯ ಸುತ್ತ 400ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ ಇದ್ದ ಕಾರಣ, ರೈತರು ತಮ್ಮ ಹೋರಾಟದ ಸ್ಥಳವನ್ನು ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ಗೇಟ್ಗೆ ಸ್ಥಳಾಂತರಿಸಿ ಧರಣಿ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸಂಚಾರ ಅಸ್ತವ್ಯಸ್ತ: ಟೋಲ್ ಬಳಿ ಜಮಾಯಿಸಿದ ನಾಲ್ಕರಿಂದ ಐದು ನೂರು ರೈತರು ರಾಷ್ಟ್ರೀಯ ಹೆದ್ದಾರಿ 48 ಅನ್ನು ಬಂದ್ ಮಾಡಿ, ಬಸ್ ಮತ್ತು ಲಾರಿಗಳ ಮುಂದೆ ಅಡ್ಡಮಲಗಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.
ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡಿ, ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಕಬ್ಬಿಗೆ ಉತ್ತಮ ದರ ಘೋಷಣೆಯಾಗಿದೆ. ಆದರೆ, ಸಕ್ಕರೆ ಸಚಿವರು ನಮ್ಮದೇ ಜಿಲ್ಲೆಯವರಾಗಿದ್ದರೂ ಇಲ್ಲಿ ದರ ನಿಗದಿ ಮಾಡಲು ಮುಂದಾಗುತ್ತಿಲ್ಲ. ಕಾರ್ಖಾನೆಗಳು ಕಬ್ಬಿನ ರಿಕವರಿ ಲೆಕ್ಕದಲ್ಲಿ ರೈತರಿಗೆ ಮೋಸ ಮಾಡುತ್ತಿವೆ ಎಂದು ಕಿಡಿಕಾರಿದರು.
ಸಚಿವರು ರಾಜೀನಾಮೆ ಕೊಡಲಿ: ಕಬ್ಬು ಬೆಳೆಯಲು ಟನ್ಗೆ 4,500ರಿಂದ 5,000 ರೂ. ಖರ್ಚಾಗುತ್ತದೆ. ಕಾರ್ಖಾನೆಗಳ ಮಾಲಕರು ಸ್ಥಳಕ್ಕೆ ಬಂದು 3,600 ರೂ. ದರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾಳೆ ಒಂದು ಲಕ್ಷ ರೈತರನ್ನು ಸೇರಿಸಿ ಹೋರಾಟ ನಡೆಸುತ್ತೇವೆ. ರೈತರಿಗೆ ನ್ಯಾಯ ಕೊಡಿಸಲು ಆಗದಿದ್ದರೆ ಸಕ್ಕರೆ ಸಚಿವರು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ವೇದಿಕೆಯಲ್ಲೇ ನೇರ ಎಚ್ಚರಿಕೆ ನೀಡಿದರು. ಕಬ್ಬಿನ ದರ ನಿಗದಿಯಲ್ಲಿ ಹಾವೇರಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಪ್ರತಿ ಟನ್ಗೆ 3,600 ರೂ. ದರ ಕೊಡಿಸಬೇಕೆಂದು ರೈತರು ಆಗ್ರಹಿಸಿದರು.
ಸದ್ಯ ಬಂಕಾಪುರ ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ರೈತರು ಧರಣಿ ಮುಂದುವರಿಸಿದ್ದಾರೆ.






