ಧರ್ಮಸ್ಥಳ ಪ್ರಕರಣ| ನ್ಯಾಯ ಸಿಗುವವರೆಗೂ ಹೋರಾಟ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು: ‘ಧರ್ಮಸ್ಥಳದಲ್ಲಿ ಕೊಲೆಯಾದ ಸೌಜನ್ಯಾ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ ಸೇರಿದಂತೆ ಎಲ್ಲರಿಗೂ ನ್ಯಾಯ ಸಿಗಬೇಕುʼ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಆಗ್ರಹಿಸಿದ್ದಾರೆ.
ಗುರುವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಧರ್ಮಸ್ಥಳದ ಸುತ್ತ ನಡೆದಿದೆ ಎನ್ನಲಾದ ಅತ್ಯಾಚಾರ, ಅಸಹಜ ಸಾವು, ಕೊಲೆ, ಭೂ ಅಕ್ರಮಗಳ ನ್ಯಾಯಕ್ಕಾಗಿ ಆಗ್ರಹಿಸಿ, ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ‘ಬೃಹತ್ ನ್ಯಾಯ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮಸ್ಥಳದ ಅಧಿಕಾರಿಗಳಿಗೆ ಸಾಮಾಜಿಕ ಕಳಕಳಿಯೂ ಇಲ್ಲ. ಸಾರ್ವಜನಿಕ ಲಜ್ಜೆಯೂ ಇಲ್ಲ. ಧರ್ಮಸ್ಥಳದಲ್ಲಿನ ಎಲ್ಲ ಘಟನೆಗಳಿಗೂ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಸಬೇಕಿದೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬೇಕಿದೆ. ಧರ್ಮಸ್ಥಳದಲ್ಲಿ ನಡೆದಿರುವ ಘಟನೆಗಳನ್ನು ಭಾವನಾತ್ಮಕವಾಗಿ ದಿಕ್ಕುತಪ್ಪಿಸುವ ಹುನ್ನಾರ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಿರಿಯ ಸಾಹಿತಿ ಡಾ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಈ ಹೋರಾಟವು ಧರ್ಮ, ದೇವರು ಅಥವಾ ದೇವಾಲಯದ ವಿರುದ್ಧ ಅಲ್ಲ, ಹೆಣ್ಣುಮಕ್ಕಳನ್ನು ಕೊಂದವರು ಯಾರು? ಉತ್ತರ ಸಿಗಬೇಕು ಎಂದರು.
ಚಿಂತಕ ಡಾ.ಸಿದ್ದನಗೌಡ ಪಾಟೀಲ ಅವರು, ಅನ್ಯಾಯದ ವಿರುದ್ಧ ಹೋರಾಡಿದರೆ ಧರ್ಮ ಜಾತಿಯ ವಿರುದ್ಧ ಪಿತೂರಿ ಎಂದು ಸುಳ್ಳು ಆಪಾದನೆಗಳನ್ನು ಹೊರಿಸಿ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ವಿಮಲಾ ಮಾತನಾಡಿ, ಧರ್ಮಸ್ಥಳದಲ್ಲಿ ಈವರೆಗೆ ನಡೆದ ನಡೆದ ಎಲ್ಲ ಸಾವುಗಳ ತನಿಖೆ ನಡೆಯಬೇಕು ಮತ್ತು ಎಸ್‌ಐಟಿ ತನಿಖೆಗೆ ಮುಕ್ತ ಅವಕಾಶ ನೀಡಬೇಕು ಎಂದು ಹೇಳಿದರು.
ವಕೀಲ ಬಾಲನ್ ಮಾತನಾಡಿ, ಪದ್ಮಲತಾ ಪ್ರಕರಣ ಮತ್ತೆ ತೆರೆಯಲಿದೆ. ವೇದವಲ್ಲಿ, ಸೌಜನ್ಯಾ ಮತ್ತು ಪದ್ಮಲತಾ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಉರಿಯುವ ಬೆಂಕಿಯಂತೆ ಇರುತ್ತಾರೆ. ಎಂದು ಹೇಳಿದರು.
ಧರ್ಮಸ್ಥಳ ದೌರ್ಜನ್ಯ ವಿರೋಧಿ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮಾತನಾಡಿ, ‘ಸೌಜನ್ಯಾ ಪ್ರಕರಣದಲ್ಲಿ ಮೃತದೇಹ ಬಿದ್ದರೂ ಎಫ್‌ಎಸ್‌ಎಲ್ ಅಧಿಕಾರಿಗಳು ಬಂದಿಲ್ಲ. ಯೂಟ್ಯೂಬರ್ ಸಮೀರ್ ಅವರ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲು ನಾಲ್ಕು ಜನ ಎಫ್‌ಎಸ್‌ಎಲ್ ಅಧಿಕಾರಿಗಳು ಬಂದಿದ್ದರು. ಇದು ನಿಜವಾದ ಅತ್ಯಾಚಾರಿಗಳನ್ನು ರಕ್ಷಿಸುವ ಷಡ್ಯಂತ್ರವಲ್ಲದೇ ಬೇರೆ ಏನು? ಎಂದು ಪ್ರಶ್ನಿಸಿದರು.
ಸಮಾವೇಶವನ್ನು ಮಾಜಿ ಸಂಸದೆ ಸುಭಾಷಿಣಿ ಅಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ವಕೀಲ ಸೂರ್ಯ ಮುಕುಂದರಾಜ್, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್, ಹಿರಿಯ ಹೋರಾಟಗಾರರಾದ ಕೆ.ನೀಲಾ, ಕೆ.ಎಸ್.ವಿಮಲಾ, ಡಾ.ಕೆ.ಪ್ರಕಾಶ್, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಮತ್ತಿತರರು ಹಾಜರಿದ್ದರು.
ಎಸ್‌ಐಟಿಯಿಂದ ಸಮಗ್ರ ತನಿಖೆ ನಡೆಯಲಿ:
ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಸುತ್ತಮತ್ತಲಿನ ಠಾಣೆಗಳಲ್ಲಿ ದಾಖಲಾದ ನೂರಾರು ಅಸಹಜ ಸಾವು, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನಡೆದ ದೌರ್ಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ, ಸೌಜನ್ಯಾ ಕೊಲೆ, ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಎಸ್‌ಐಟಿಯಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ಧರ್ಮಸ್ಥಳದಲ್ಲಿ ದಲಿತರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿರುವ ವ್ಯವಸ್ಥೆ ಮನುಸ್ಮತಿಯ ಆಧಾರದ ಮೇಲೆ ನಿಂತಿದೆ. ಅತ್ಯಾಚಾರ ಮತ್ತು ಕೊಲೆಗಳನ್ನು ಖಂಡಿಸಿದರೆ ಜೀವಬೆದರಿಕೆ ಹಾಕಲಾಗುತ್ತಿದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು.
-ಸುಭಾಷಿಣಿ ಅಲಿ, ಮಾಜಿ ಸಂಸದೆ







