ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿ: ಪ್ರೊ.ಸಿದ್ದರಾಮಯ್ಯ
ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರಿ ಶಾಲೆಗಳ ಹಸ್ತಾಂತರ ಖಂಡಿಸಿ ಸಮಾಲೋಚನಾ ಸಭೆ

ಬೆಂಗಳೂರು : ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಹೋರಾಡುವುದು ಸಮಾಜದಲ್ಲಿರುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ನೈತಿಕ ಜವಾಬ್ದಾರಿ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್(ಎಡಿಬಿ) ಜೊತೆಗೆ ರಾಜ್ಯ ಸರಕಾರ ಮಾಡಿಕೊಂಡಿರುವ ಒಪ್ಪಂದ ಹಾಗೂ ಸರಕಾರಿ ಶಾಲೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಹಸ್ತಾಂತರಿಸುವುದನ್ನು ವಿರೋಧಿಸಿ ನಗರದ ಗಾಂಧಿ ಭವನದಲ್ಲಿ ಎಐಡಿಎಸ್‍ಒ ರಾಜ್ಯ ಸಮಿತಿಯ ವತಿಯಿಂದ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಎನ್‍ಇಪಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗಳು ಶಿಕ್ಷಣದ ಮೂಲ ಆಶಯವನ್ನೇ ಕೊಲ್ಲುತ್ತಿವೆ. ಈ ಮೂಲಕ ಉಳ್ಳವರಿಗೆ ಒಂದು ರೀತಿಯ ಹಾಗೂ ಇಲ್ಲದವರಿಗೆ ಒಂದು ರೀತಿಯ ಶಿಕ್ಷಣವನ್ನು ನೀಡಲು ರಾಜ್ಯ ಸರಕಾರ ಮುಂದಾಗಿದೆ. ಇದು ಸಮಾಜದ್ರೋಹಿ ಹಾಗೂ ಶಿಕ್ಷಣದ್ರೋಹಿ ಕೆಲಸ. ಶಾಲೆ ಮುಚ್ಚುವುದನ್ನು ಬಿಟ್ಟು, ರಾಜ್ಯ ಸರಕಾರವು ಸಾಮಾಜಿಕ, ಸಾಂಸ್ಕೃ ತಿಕ ನೆಲೆಗಟ್ಟಿನಲ್ಲಿ ಸಮಾನ ಶಿಕ್ಷಣ ನೀತಿಯನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರವು ಎನ್‍ಇಪಿ-2020ನ್ನು ವಿರೋಧಿಸಿ, ಅದರ ಮುಂದುವರಿದ ಭಾಗವಾಗಿ ರಾಜ್ಯ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಲು ಹೊರಟಿದೆ. 2010ರ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿರುವ ದತ್ತು ಯೋಜನೆಯನ್ನು ಕೂಡಲೇ ರಾಜ್ಯ ಸರಕಾರ ಹಿಂಪಡೆಯಬೇಕು. ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 68 ಸಾವಿರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ರಾಜ್ಯ ಸರಕಾರವು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಿ, ವೃತ್ತಿಪರ ಶಿಕ್ಷಣ ನೀಡಲು ನಿರ್ಧರಿಸಿದೆ. ಈ ಮೂಲಕ ಖಾಸಗಿ ಕಾರ್ಖಾನೆಗಳಿಗೆ ಬೇಕಾದ ಜೀತದಾಳುಗಳನ್ನು ಸೃಷ್ಟಿ ಮಾಡುವ ಸಿದ್ಧತೆಯನ್ನು ನಡೆಸುತ್ತಿದೆ ಎಂದರು.
ಅಂಕಣಕಾರ ಶಿವಸುಂದರ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ನಿರ್ವಹಣೆಯ ಬದಲು ಖಾಸಗಿ ಸಂಸ್ಥೆಗಳಿಗೆ ಪ್ರಾಯೋಜಕತ್ವ ನೀಡುವ ಪ್ರವೃತ್ತಿ ನಡೆಯುತ್ತಿದೆ. ಶಿಕ್ಷಣ, ಅರೋಗ್ಯ, ವಸತಿ, ಉದ್ಯೋಗ ಮತ್ತು ಅಗತ್ಯ ಸೌಲಭ್ಯಗಳು ನಾಗರಿಕರಿಗೆ ಘನತೆಯ ಹಕ್ಕುಗಳಾಗಿ ದೊರೆಯಬೇಕಿತ್ತು. ಆದರೆ ಇಂದು ಅವುಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಲೋಚನಾ ಸಭೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ನಿವೃತ್ತ ಪ್ರಾಧ್ಯಾಪಕಿ ಡಾ.ಲತಾ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎ. ಮುರಿಗೆಪ್ಪ, ಎಐಡಿಎಸ್‍ಒ ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ಮತ್ತಿತರರು ಹಾಜರಿದ್ದರು.
ಸಭೆಯ ನಿರ್ಣಯಗಳು:
* ರೈತ, ಕಾರ್ಮಿಕ, ದಲಿತ, ಕನ್ನಡಪರ ಸೇರಿದಂತೆ ರಾಜ್ಯದ ಎಲ್ಲಾ ಸಂಘಟನೆಗಳೊಂದಿಗೆ ರಾಜ್ಯಮಟ್ಟದ ಸಭೆ ನಡೆಸಿ, ಹೋರಾಟದ ಮುಂದಿನ ಹಾದಿಯನ್ನು ನಿರ್ಧರಿಸುವುದು.
* ರಾಜ್ಯಮಟ್ಟದ ಹೋರಾಟವನ್ನು ಕೈಗೊಳ್ಳುವುದು.
* ಎಲ್ಲ್ಲ ಹಳ್ಳಿಗಳಿಗೆ ಭೇಟಿ ನೀಡಿ ತಳಮಟ್ಟದಲ್ಲಿ ಹೋರಾಟ ರೂಪಿಸುವುದು.






