ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೊಬೈಲ್ ಬಳಸಿ ನೃತ್ಯ ಮಾಡಿದ ಆರೋಪ: ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೊಬೈಲ್ ಬಳಸಿ ನೃತ್ಯ ಮಾಡಿದ ಆರೋಪದಡಿ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಅಮಾನತುಗೊಂಡ ಬೆಂಗಳೂರು ಕೇಂದ್ರ ಕಾರಾಗೃಹ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ಅವರು ನೀಡಿದ ದೂರನ್ನು ಆಧರಿಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್, ಧನಂಜಯ, ಮಂಜುನಾಥ್ ಹಾಗೂ ಚರಣ್‍ರಾವ್ ಎಂಬುವರ ವಿರುದ್ಧ ಕರ್ನಾಟಕ ಕಾರಾಗೃಹ(ತಿದ್ದುಪಡಿ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಪರಾಧಿಗಳಾದ ಜುಹಾಬ್ ಶಕೀಲ್ ಮನ್ನಾ, ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತರುಣ್ ಕೊಂಡಾರು ಮೊಬೈಲ್ ಬಳಕೆ ಸೇರಿದಂತೆ ವಿಶೇಷ ಆತಿಥ್ಯ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಕಾರಾಗೃಹ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ಅವರು ನಾಲ್ಕು ಪ್ರತ್ಯೇಕ ದೂರು ದಾಖಲಿಸಿದ್ದರು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಾಲ್ಕು ಎನ್‍ಸಿಆರ್ ದಾಖಲಿಸಿಕೊಂಡಿದ್ದರು. ಅಪರಾಧ ಸ್ವರೂಪ ಆಧರಿಸಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳ ವಿರುದ್ಧ ಮೊದಲ ಎಫ್‍ಐಆರ್ ದಾಖಲಿಸಲಾಗಿದೆ. ನ್ಯಾಯಾಲಯ ಅನುಮತಿ ದೊರೆತ ಬಳಿಕ ಬಾಕಿ ಮೂರು ಎಫ್‍ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳು ವಿವಿಧ ಅಪರಾಧ ಪ್ರಕರಣಗಳಲ್ಲಿ ಸುಮಾರು ಐದಾರು ವರ್ಷಗಳಿಂದ ಸೆರೆವಾಸದಲ್ಲಿದ್ದಾರೆ. ಬ್ಯಾರಕ್-8ರ ಕೊಠಡಿ ಸಂಖ್ಯೆ-7ರಲ್ಲಿ ಈ ನಾಲ್ವರು ಮೊಬೈಲ್‍ನಲ್ಲಿ ಹಾಡು ಹಾಕಿ ನೃತ್ಯ ಮಾಡಿದ್ದರು. ಈ ವಿಡಿಯೊ ವೈರಲ್ ಆಗಿತ್ತು.







