ಬೆಂಗಳೂರು | ಡ್ರಾಪ್ ನೀಡುವ ನೆಪದಲ್ಲಿ ಪಿಸ್ತೂಲಿನಿಂದ ಕಾರ್ಮಿಕರಿಗೆ ಬೆದರಿಸಿ ಸುಲಿಗೆ: ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಡ್ರಾಪ್ ನೀಡುವ ನೆಪದಲ್ಲಿ ಇಬ್ಬರು ಕಾರ್ಮಿಕರನ್ನು ಕಾರಿಗೆ ಹತ್ತಿಸಿಕೊಂಡು ಪಿಸ್ತೂಲಿನಿಂದ ಬೆದರಿಸಿ, ಹಣ ಮತ್ತು ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದ ಪ್ರಕರಣದಡಿ ನಾಲ್ವರು ಆರೋಪಿಗಳನ್ನು ಇಲ್ಲಿನ ಪೀಣ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕನಕಮೂರ್ತಿ, ಶ್ರೀನಿವಾಸ್, ಕಿರಣ್, ಶೇಖ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ವಿಜಯನಗರ ಜಿಲ್ಲೆಯ ಇಬ್ಬರು ಕೂಲಿ ಕಾರ್ಮಿಕರು ಆ.14ರಂದು ರಾತ್ರಿ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದು, ವಿಜಯನಗರಕ್ಕೆ ಹೋಗಲು ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದರು.
ಆ ಸಂದರ್ಭದಲ್ಲಿ ಇವರ ಬಳಿ ಕಾರೊಂದು ಬಂದು ನಿಂತಿದೆ. ಕಾರಿನಲ್ಲಿದ್ದ ಮೂವರು ಅಪರಿಚಿತರು ಎಲ್ಲಿಗೆ ಹೋಗಬೇಕೆಂದು ವಿಚಾರಿಸಿ ವಿಜಯನಗರಕ್ಕೆ ಡ್ರಾಪ್ ನೀಡುವುದಾಗಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಈ ಕಾರು ನೆಲಮಂಗಲದ ದಾಬಸ್ಪೇಟೆ ಬಳಿ ಹೋಗುತ್ತಿದ್ದಂತೆ ಮಾರ್ಗ ಮಧ್ಯೆ ಪಿಸ್ತೂಲ್ ತೋರಿಸಿ, ಬೆದರಿಸಿ, ಅವರ ಬಳಿ ಇದ್ದ 5 ಸಾವಿರ ರೂ. ನಗದು ಹಾಗೂ 75 ಸಾವಿರ ಬೆಲೆ ಬಾಳುವ 2 ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿಕೊಂಡು ಅವರಿಬ್ಬರನ್ನು ಕಾರಿನಿಂದ ಕೆಳಗೆ ಇಳಿಸಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ಮಾರತ್ಹಳ್ಳಿಯ ದೊಡ್ಡನಕ್ಕುಂದಿಯಲ್ಲಿರುವ ರೂಮ್ವೊಂದರಲ್ಲಿ ತಂಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು, 3 ಮೊಬೈಲ್ಗಳು, ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿದಾಗ ಕೃತ್ಯಕ್ಕೆ ಬಳಿಸಿದ್ದ ಪಿಸ್ತೂಲ್ ಅನ್ನು ಈ ಹಿಂದೆ ಇವರ ಜೊತೆ ಜೈಲಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ನೀಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿಗಳು ನೀಡಿದ ಮಾಹಿತಿಯಂತೆ, ಕೃತ್ಯಕ್ಕೆ ಪಿಸ್ತೂಲ್ ಅನ್ನು ನೀಡಿದ್ದ ಆರೋಪಿಯನ್ನು ಬಿಜಾಪುರ ಜಿಲ್ಲೆಯ ಹೊರ್ತಿ ಗ್ರಾಮದಲ್ಲಿ ಬಂಧಿಸಲಾಗಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.







