ಜಿಬಿಎ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ ಕೋಟ್ಯಂತರ ರೂ. ದುರ್ಬಳಕೆ : ಆರೋಪ
ಆರೋಗ್ಯಾಧಿಕಾರಿ ಡಾ.ಎಸ್.ಕೆ.ಸವಿತಾ ಅಮಾನತಿಗೆ ಆಗ್ರಹ

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸದೆ ತಮ್ಮ ಮಗನ ಹೆಸರಿನಲ್ಲಿ 1 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗ ಪಡಿಸಿಕೊಂಡು, ನಂಬಿಕೆ ದ್ರೋಹ ಎಸಗಿರುವ ಆರೋಗ್ಯಾಧಿಕಾರಿ ಡಾ.ಎಸ್.ಕೆ. ಸವಿತಾ ಅವರನ್ನು ತಕ್ಷಣ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಈ ಕುರಿತಂತೆ ಬುಧವಾರ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಆರೋಗ್ಯಾಧಿಕಾರಿ ಡಾ.ಎಸ್.ಕೆ.ಸವಿತಾ ಹಾಗೂ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಆಗಿರುವ ಆಕೆಯ ಪುತ್ರ ಚಿರಾಗ್, ಪಾಲಿಕೆಯಲ್ಲಿ ಕಾಮಗಾರಿ ನಡೆಸದೆ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪವು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಸಚಿವ ಹಾಗೂ ಇಲಾಖೆಯ ಅಪರ ಕಾರ್ಯದರ್ಶಿಗಳು ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಡಾ.ಸವಿತಾ ಅವರು ಬೊಮ್ಮನಹಳ್ಳಿ ಮತ್ತು ಆರ್.ಆರ್.ನಗರವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ‘ಮೆ॥ ಎ.ವಿ.ಎಸ್ ಎಂಟರ್ ಪ್ರೈಸಸ್’ ಸಂಸ್ಥೆ ಹೆಸರಿನಲ್ಲಿ ತಮ್ಮ ಪುತ್ರ ಚಿರಾಗ್ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಿ ವಂಚಿಸಿರುವುದು ಕಂಡುಬಂದಿದೆ. ಈ ಕುರಿತು ತನಿಖೆ ನಡೆಸಲು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಯಾಜ್ ಅಹ್ಮದ್ ಎಸ್.ದಫೇದಾರ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ.
ಸದ್ಯ, ಭಾರೀ ಮೊತ್ತ ಹಣದ ಅವ್ಯವಹಾರದಲ್ಲಿ ಭಾಗಿಯಾಗಿರುವ ಡಾ.ಎಸ್.ಕೆ. ಸವಿತಾ ಅವರನ್ನು ತಕ್ಷಣ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಸಂಘವು ಪತ್ರದಲ್ಲಿ ಮನವಿ ಮಾಡಿದೆ.






