ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್‍ವಾರು ಕರಡು ಮತದಾರರ ಪಟ್ಟಿ ಪ್ರಕಟ; ಐದು ನಗರ ಪಾಲಿಕೆಗಳಲ್ಲಿ 88,91,411 ಮತದಾರರು

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಚುನಾವಣೆ ನಡೆಸುವ ಸಲುವಾಗಿ ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‍ವಾರು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಪಟ್ಟಿಯಲ್ಲಿ 88,91,411 ಮತದಾರರಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್ ಸಂಗ್ರೇಶಿ ಹೇಳಿದ್ದಾರೆ.
ಸೋಮವಾರ ಇಲ್ಲಿನ ಜಿಬಿಎ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಎನ ಐದು ನಗರ ಪಾಲಿಕೆಗಳ 369 ವಾರ್ಡ್‍ಗಳಲ್ಲಿ 45,69,193 ಪುರುಷ ಮತದಾರರು, 43,20,583 ಮಹಿಳಾ ಮತದಾರರು ಹಾಗೂ 1,635 ಇತರೆ ಮತದಾರರು ಸೇರಿದಂತೆ, ಒಟ್ಟು 88,91,411 ಮತದಾರರಿದ್ದಾರೆ ಎಂದರು.
ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 14,25,483, ಉತ್ತರ ಪಾಲಿಕೆಯಲ್ಲಿ 19,54,206, ದಕ್ಷಿಣ ಪಾಲಿಕೆಯಲ್ಲಿ 17,44,270, ಪೂರ್ವ ಪಾಲಿಕೆಯಲ್ಲಿ 10,41,738 ಮತ್ತು ಪಶ್ಚಿಮ ಪಾಲಿಕೆಯಲ್ಲಿ 27,25,714 ಮತದಾರರಿದ್ದಾರೆ. ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 8,044 ಮತಗಟ್ಟೆಗಳಿವೆ ಎಂದು ಅವರು ವಿವರಿಸಿದರು.
ಮತದಾರರ ಸಹಾಯವಾಣಿ: ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳ ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದ್ದು, ಬೆಂಗಳೂರು ಕೇಂದ್ರ 080-22975803, ಬೆಂಗಳೂರು ಉತ್ತರ 080-22975936, ಬೆಂಗಳೂರು ದಕ್ಷಿಣ 9480685704, ಬೆಂಗಳೂರು ಪೂರ್ವ 9480685706 ಮತ್ತು ಬೆಂಗಳೂರು ಪಶ್ಚಿಮ ಪಾಲಿಕೆಗೆ ಸಂಬಂಧಿಸಿ 9480685703 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ನಮೂನೆಗಳ(ಫಾರಂ) ಮೂಲಕ ಅರ್ಜಿ ಸಲ್ಲಿಕೆ:
ಅಂತಿಮ ಮತದಾರರ ಪಟ್ಟಿ ಸಿದ್ಧತೆಗೆ, ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿ / ಬಿ.ಎಲ್.ಓ ಅವರ ಬಳಿ ನಿಗಧಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಮತದಾರರ ಹೆಸರು ಸೇರ್ಪಡೆಗೆ ನಮೂನೆ–4, ಹೆಸರು ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು ನಮೂನೆ–5, ಹೆಸರು ತಿದ್ದುಪಡಿಗೆ ನಮೂನೆ–6, ಸ್ಥಳ ಬದಲಾವಣೆಗೆ ನಮೂನೆ–7, ಹೆಸರು ತೆಗೆದು ಹಾಕಲು ನಮೂನೆ–8 ಅನ್ನು ಸಲ್ಲಿಸಬೇಕು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ನಗರ ಪಾಲಿಕೆಗಳ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಪೆÇಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ಡಾ: ರಾಜೇಂದ್ರ ಕೆ.ವಿ, ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಯಾದ ಸೆಲ್ವಮಣಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ʼಇದು ಎಸ್‍ಐಆರ್ ಅಲ್ಲʼ
ಈಗ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿದ್ದು, ಇದಕ್ಕೆ ಅರ್ಹ ಮತದಾರರನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಅಲ್ಲ. ಕೇಂದ್ರ ಚುನಾವಣಾ ಆಯೋಗವೇ ಎಸ್‍ಐಆರ್ ಅನ್ನು ನಡೆಸಲಿದೆ.
- ಜಿ.ಎಸ್ ಸಂಗ್ರೇಶಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ
ಫೆ.3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ, ಮಾ.16ರಂದು ಅಂತಿಮ ಪಟ್ಟಿ ಪ್ರಕಟ
ಕರಡು ಮತದಾರರ ಪಟ್ಟಿಯನ್ನು ಜಿಬಿಎ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಜ.20ರಿಂದ ಫೆ.3 ರವರೆಗೆ ಬೂತ್ ಲೆವಲ್ ಅಧಿಕಾರಿಗಳು(ಬಿಎಲ್‍ಓ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆ.4 ರಿಂದ ಫೆ.18ರವರೆಗೆ ನಡೆಯಲಿದ್ದು, ಮಾ.16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಅಂತಿಮ ಪಟ್ಟಿಯ ನಂತರವೂ ಪೂರಕ ಪಟ್ಟಿಗೆ ಅರ್ಹ ಮತದಾರರನ್ನು ಸೇರ್ಪಡೆ ಮಾಡಲಾಗುವುದು.
- ಆರ್. ರಾಮಚಂದ್ರನ್, ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ







