ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿಗೆ ಸರಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Photo: X/@DKShivakumar)
ಬೆಂಗಳೂರು: "ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿ ಹಾಗೂ ಸೇವೆಗೆ ನಮ್ಮ ಸರಕಾರ ಬದ್ಧವಾಗಿದೆ. ಸರಕಾರ ನಿಮ್ಮ ಜೊತೆಗೆ ನಿಲ್ಲಲಿದೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಬುಧವಾರ ಮರ್ಕಝಿ ಮಿಲಾದ್ ಒ ಸೀರತ್ ಕಮಿಟಿ, ಸುನ್ನಿ ಜಮಾಯತ್ ಆಲ್ ಕರ್ನಾಟಕ ವತಿಯಿಂದ ವೈಎಂಸಿಎ ಮೈದಾನದಲ್ಲಿ ನಡೆದ ಮೀಲಾದುನ್ನೆಬಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಯಾವ ಜಾತಿ, ಧರ್ಮದಲ್ಲಿ ಹುಟ್ಟುತ್ತೇವೆ ಎಂದು ಅರ್ಜಿ ಹಾಕುವುದಿಲ್ಲ. ಯಾವುದೇ ಧರ್ಮ ಬೇರೆಯವರಿಗೆ ತೊಂದರೆ ಮಾಡು ಎಂದು ಹೇಳುವುದಿಲ್ಲ. ಶಾಂತಿ ನೆಲೆಸಿ, ದೇಶದಲ್ಲಿ ಐಕ್ಯತೆ, ಸಮಗ್ರತೆ ಇರಬೇಕು ಎಂದು ಎಲ್ಲಾ ಧರ್ಮಗುರುಗಳು ಸಾರಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
"ಪ್ರವಾದಿ ಮಹಮ್ಮದ್ ಅವರ ಜನ್ಮದಿನದಂದು ಅವರ ಸಂದೇಶ ಸ್ಮರಿಸುತ್ತಿದ್ದೇವೆ. ನಾನು ಹೊಸದಿಲ್ಲಿ ಪ್ರವಾಸ ಕೈಗೊಳ್ಳಬೇಕಿತ್ತು. ನಿಮ್ಮ ಮೇಲಿನ ಅಭಿಮಾನ ಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನೀವು ಶಾಂತಿ ಕಾಪಾಡುವ ಜನ. ನಿಮಗೆ ಶುಭಕೋರಲು ಬಂದಿದ್ದೇನೆ" ಎಂದರು.
"ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ. ಸಾಮಾಜಿಕ ನ್ಯಾಯ ಹಾಗೂ ಶಾಂತಿ ಕಾಪಾಡಲು ಬದ್ಧವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಣ ಮೀಸಲಿಟ್ಟು ಕಾರ್ಯಕ್ರಮ ರೂಪಿಸಲಾಗಿದೆ. ನಿಮ್ಮ ಸಹಕಾರದಲ್ಲಿ ಬಲಿಷ್ಠ ಸರಕಾರ ಬಂದಿದೆ. ನಮ್ಮ ಸರಕಾರ ಮೊದಲ ಬಾರಿಗೆ ಈ ಸಮುದಾಯಕ್ಕೆ ಪರಿಷತ್ ಸಭಾಪತಿ ಸ್ಥಾನ, 3 ಸಚಿವ ಹಾಗೂ ಹತ್ತಾರು ನಿಗಮ ಅಧ್ಯಕ್ಷ ಸ್ಥಾನ ನೀಡಿದೆ ಎಂದು ಅವರು ಹೇಳಿದರು.






