ಎಐಸಿಸಿ ಕಾರ್ಯದರ್ಶಿ ಶ್ರೀನಿವಾಸ್ ಬಿ.ವಿ. ಅವರಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ

ಬೆಂಗಳೂರು: ರವಿವಾರದ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ(ಎಐಸಿಸಿ) ಕಾರ್ಯದರ್ಶಿಯಾಗಿ(ಗುಜರಾತ್ ಉಸ್ತುವಾರಿ) ನೂತನವಾಗಿ ನೇಮಕಗೊಂಡ ಶ್ರೀನಿವಾಸ್ ಬಿ.ವಿ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಶ್ರೀನಿವಾಸ್ ಅವರು ಹೊಸ ಹುದ್ದೆಯನ್ನು ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಭೇಟಿ ನೀಡಿದರು. ಈ ವೇಳೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಅವರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಯುವ ಕಾಂಗ್ರೆಸ್ ಕಾರ್ಯಕರ್ತರು, ಎನ್‍ಎಸ್‍ಯುಐ ಸದಸ್ಯರು ಮತ್ತು ಬೆಂಬಲಿಗರು ಸ್ವಾಗತಿಸಿದರು.
ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿನ ಕ್ವೀನ್ಸ್‍ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯ ವರೆಗೆ ಬೆಂಬಲಿಗರು ಆಕರ್ಷಕ ಬೈಕ್ ಮತ್ತು ಕಾರು ರ್ಯಾಲಿಯನ್ನು ನಡೆಸಿದರು. ಇಡೀ ಮಾರ್ಗದಲ್ಲಿ, ಸಾರ್ವಜನಿಕರು ಹಾಗೂ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಶ್ರೀನಿವಾಸ್ ಅವರಿಗೆ ಬೃಹತ್ ಹಾರ ಹಾಕಿ ಹಾಗೂ ಹೂವುಗಳನ್ನು ಸುರಿಸಿ, ಶುಭಾಶಯಗಳನ್ನು ತಿಳಿಸಿದರು.







