ಬಿಜೆಪಿ ಸಂಸದರು ಕೇಂದ್ರದಿಂದ ಬರಬೇಕಾದ ಅನುದಾನ ವಿಚಾರ ಯಾಕೆ ಮಾತನಾಡುತ್ತಿಲ್ಲ: ಎಚ್.ಸಿ.ಬಾಲಕೃಷ್ಣ

ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ಕಿಡಿಕಾರುವ ಬಿಜೆಪಿ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನವನ್ನು ತರುವ ವಿಚಾರವನ್ನು ಯಾಕೆ ಮಾತನಾಡುವುದಿಲ್ಲ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಗುರುವಾರ ಪರಿಷತ್ ಕಲಾಪದಲ್ಲಿ ಬರ ಕುರಿತ ವಿಶೇಷ ಚರ್ಚೆ ಸಂಬಂಧ ಬಿಜೆಪಿ ಸದಸ್ಯ ಎಸ್.ಅರುಣ್ ಮಾತನಾಡಿ, ಕೇಂದ್ರದೊಂದಿಗೆ ಸದಾ ರಾಜ್ಯ ಸರಕಾರ ಜಟಾಪಟಿ ನಡೆಸುವ ಕಾರಣದಿಂದಾಗಿ ರಾಜ್ಯಕ್ಕೆ ಬರಬೇಕಾದ ಅನುದಾನ ದೊರೆಯುತ್ತಿಲ್ಲ. ಎಲ್ಲರ ವಿಶ್ವಾಸ ಗಳಿಸಿಕೊಂಡು ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದಿದ್ದರೆ ರಾಜ್ಯಕ್ಕೆ ಅನುದಾನ ದೊರೆಯುತ್ತಿತ್ತು ಎಂದರು.
ಆಗ ಸಚಿವ ಎಚ್.ಸಿ. ಬಾಲಕೃಷ್ಣ ಮಾತನಾಡಿ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನವನ್ನು ಕೇಂದ್ರ ನೀಡುತ್ತಿಲ್ಲ. ರಾಜ್ಯಕ್ಕೆ ದೊರೆಯಬೇಕಾದ ಅನುದಾನ ಸಂಬಂಧ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಿಲ್ಲಿಗೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸುಪ್ರೀಂ ಕೋರ್ಟ್ ಮೊರೆ ಹೋಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಲಾಯಿತು. ಅನುದಾನ ವಿಚಾರದಲ್ಲಿ ಮಾತನಾಡುವುದಕ್ಕೆ ರಾಜ್ಯದ ಬಿಜೆಪಿ ಸಂಸದರಿಗೆ ಧಮ್ ಇಲ್ಲ ಎಂದರು.
ಆಗ ಎಸ್.ಅರುಣ್ ಮಾತನಾಡಿ, ರಾಜ್ಯಕ್ಕೆ ಬರಬೇಕಾದ ಅನುದಾನ ಸಂಬಂಧ ರಾಜ್ಯ ಸರಕಾರ ಸರ್ವ ಪಕ್ಷ ನಿಯೋಗ ಕರೆಯಬೇಕಿತ್ತು. ಆದರೆ ಮಾಡಿಲ್ಲ. ಅನುದಾನ ವಿಚಾರವಾಗಿ ನಮ್ಮ ಪ್ರಧಾನಿಯವರ ಹೃದಯ ವಿಶಾಲವಿದೆ ಎಂದರು.
ಈ ವೇಳೆ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಪ್ರಧಾನಿ ಬಳಿ ಮಾತನಾಡುವ ಮೂಲಕ ಹೃದಯ ತೆರೆಸುವವರು ಯಾರೂ ಇಲ್ಲವಲ್ಲ ಎಂದು ಹೇಳಿದರು.






