ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಜೆಡಿಎಸ್ ಸಿದ್ಧತೆ ಕೈಗೊಂಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ನಮ್ಮ ಪಕ್ಷದಲ್ಲಿ ಒತ್ತಡ ಇದೆ. ಈ ಬಗ್ಗೆ ಬಿಜೆಪಿ ಉನ್ನತ ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನು ನಡೆಸಿದ್ದೇನೆ. ಸಮಯ ಇದೆ, ನೋಡೋಣ ಎಂದರು.
ನಾನು ನಮ್ಮ ಪಕ್ಷದ ರಾಜ್ಯಾಧ್ಯಕ್ಷ. ಹೀಗಾಗಿ ಪಕ್ಷದ ಸಂಘಟನೆಯ ಜವಾಬ್ದಾರಿ ನನಗಿದೆ. ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ. ಆದರೆ ಈಗಲೇ ಅಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ. ಹಾಗಾಗಿ ಇವತ್ತೇ, ನಾಳೆ ದಿನವೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನೋಡಿಕೊಳ್ಳುವ ಜತೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಎಸ್‍ಐಆರ್ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣಿ ಪ್ರಕ್ರಿಯೆಯಲ್ಲಿ ಗುಂಪು ಗುಂಪಾಗಿ ಪರಿಷ್ಕರಣೆ ನಡೆದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಹೇಳಿಕೆ ಗಮನಿಸಿದ್ದೇನೆ. ನಾನು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ನಿಯೋಗ ಹೋಗಿ ದಾಖಲೆ ಸಮೇತ ದೂರು ಕೊಟ್ಟಿದ್ದೇವೆ. ರಾಮನಗರ, ಯಶವಂತಪುರ ಸೇರಿ ವಿವಿಧೆಡೆ ಗುಂಪು ಗುಂಪಾಗಿ ಎಸ್‍ಐಆರ್ ಮಾಡಿರುವ ದಾಖಲೆಗಳನ್ನು ಸೇರಿಸಿ ಕೊಟ್ಟಿದ್ದೇವೆ. ಸರಿಯಾಗಿ ಎಸ್‍ಐಆರ್ ನಡೆದಿದ್ದರೆ 35 ಬಿಇಓ ಗಳಿಗೆ ಯಾಕೆ ನೋಟಿಸ್ ಕೊಟ್ಟರು? ಎಂದು ಪ್ರಶ್ನೆ ಮಾಡಿದರು.






