ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆಗೂ ತಟ್ಟಿದ ಮಳೆ ಅವಾಂತರ: 14 ಲಕ್ಷ ಮೌಲ್ಯದ 5 ಸಾವಿರಕ್ಕೂ ಅಧಿಕ ಪುಸ್ತಕಗಳು ನಾಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ(ಎ.29) ಸುರಿದ ಧಾರಾಕಾರ ಮಳೆಯು ನಗರದೆಲ್ಲೆಡೆ ಭಾರೀ ಅವಾಂತರಗಳನ್ನು ಸೃಷ್ಟಿಸಿದ್ದು, ಅದರಲ್ಲಿ ನಗರದ ಚರ್ಚ್ ಸ್ಟ್ರೀಟ್‍ನಲ್ಲಿರುವ ಪ್ರಸಿದ್ಧ ಪುಸ್ತಕ ಮಳಿಗೆಯೊಂದರಲ್ಲಿ 4 ಸಾವಿರದಿಂದ 5 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ.
‘ದಿ ಬುಕ್‍ವರ್ಮ್’ ಎಂಬ ಪುಸ್ತಕ ಮಳಿಗೆ ನೀರಿನಲ್ಲಿ ತೇಲುತ್ತಿರುವ ಪುಸ್ತಕಗಳ ಸರಣಿ ಚಿತ್ರಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ನಾವು 4 ಸಾವಿರರಿಂದ 5ಸಾವಿರದಷ್ಟು ಪುಸ್ತಕಗಳನ್ನು ಕಳೆದುಕೊಂಡಿದ್ದೇವೆ ಎಂದು ಬರೆದುಕೊಂಡಿದೆ.
ಈ ಬಗ್ಗೆ ಪುಸ್ತಕ ಮಳಿಗೆ ಮಾಲಕ ಕೃಷ್ಣ ಎಂಬವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೆಲ ದಿನಗಳ ಹಿಂದಷ್ಟೇ ಮಳಿಗೆಗೆ ಹೊಸ ಪುಸ್ತಕಗಳ ಸ್ಟಾಕ್ ಬಂದಿತ್ತು. ಬೇಸಿಗೆ ರಜೆ ಹಿನ್ನೆಲೆ ಪುಸ್ತಕ ವ್ಯಾಪಾರ ಹೆಚ್ಚಾದ ಕಾರಣ ಹೆಚ್ಚುವರಿ ಸ್ಟಾಕ್ ತರಿಸಿದ್ದೆವು. ಆದರೆ, ಈಗ ಅನೇಕ ಪುಸ್ತಕಗಳು ಹಾನಿಗೊಳಗಾಗಿವೆ ಎಂದಿದ್ದಾರೆ.
ನಾಶವಾಗಿರುವ ಪುಸ್ತಕಗಳ ಮೌಲ್ಯ 14 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ‘ಬುಕ್ ಮ್ಯಾನ್ ಆಫ್ ಬೆಂಗಳೂರು’ ಎಂದೇ ಖ್ಯಾತಿ ಪಡೆದಿರುವ ಈ ಪುಸ್ತಕದ ಮಳಿಗೆ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ಸಾವಿರಾರು ಪುಸ್ತಕಗಳು ನಾಶವಾಗಿರುವುದರಿಂದ ಪುಸ್ತಕ ಪ್ರೇಮಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.






