ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸುವುದು ಧಾರ್ಮಿಕ ಭಾವನೆಗೆ ಧಕ್ಕೆಯಾಗದು; 13 ಮಂದಿ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ‘ನ್ಯಾಯ ನಿರಾಕರಣೆಯಾಗಿದೆ, ನ್ಯಾಯಕ್ಕಾಗಿ ಧ್ವನಿ ಎತ್ತಿ’ ಎಂದು ಪೋಸ್ಟರ್‌ಗಳನ್ನು ಹಾಕುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದಿಸುವ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಮಂಗಳೂರಿನಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ 13 ಮಂದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆರೋಪಿಗಳ ವಿರುದ್ಧದ ಎಲ್ಲ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದರಿಂದ ಮಾತ್ರ ದೇಶದ್ರೋಹದ ಕೃತ್ಯ ಎಸಗಿದಂತಾಗುವುದಿಲ್ಲ ಅಥವಾ ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡಿದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಪೋಸ್ಟರ್‌ಗಳಲ್ಲಿನ ಬರಹಗಳು ನ್ಯಾಯಾಲಯದ ತೀರ್ಪಿನ ಬಗೆಗಿನ ಅಸಮ್ಮತಿಯನ್ನು ಮಾತ್ರ ವ್ಯಕ್ತಪಡಿಸುತ್ತವೆ. ಅವು ದ್ವೇಷವನ್ನು ಪ್ರಚೋದಿಸುವ ಅಥವಾ ಸಮಾಜದ ಸೌಹಾರ್ದತೆ ಕೆಡಿಸುವ ಉದ್ದೇಶ ಹೊಂದಿವೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಪೋಸ್ಟರ್‌ಗಳಲ್ಲಿನ ಬರಹಗಳಿಂದ ಕೆಲ ವ್ಯಕ್ತಿಗಳು ಕೋಪಗೊಳ್ಳಬಹುದು ಎಂಬ ಕಾರಣಕ್ಕೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ ಅಥವಾ 295ಎ ಅಡಿ ಅಪರಾಧವನ್ನು ಅನ್ವಯಿಸಲಾಗದು. ಪೋಸ್ಟರ್‌ಗಳಲ್ಲಿನ ಅಭಿವ್ಯಕ್ತಿಗಳು ಸಂವಿಧಾನದ ಪರಿಚ್ಛೇದ 19 ಹಾಗೂ 21ರ ಅಡಿಯಲ್ಲಿ ರಕ್ಷಣೆ ಪಡೆಯುತ್ತವೆ. ಸಾರ್ವಜನಿಕ ಹೇಳಿಕೆಗಳು ಅಥವಾ ಪೋಸ್ಟರ್‌ಗಳ ಪರಿಣಾಮವನ್ನು ಸಮಾಜದ ಸಾಮಾನ್ಯ, ವಿವೇಚನಾಶೀಲ ವ್ಯಕ್ತಿಯ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕು. ಕೆಲವೇ ವ್ಯಕ್ತಿಗಳ ವೈಯಕ್ತಿಕ ಭಾವನೆಗಳ ಆಧಾರದ ಮೇಲೆ ಅವುಗಳ ಪರಿಣಾಮವನ್ನು ನಿರ್ಧರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.






