ಪ್ರಿಯಾಂಕ್ ಖರ್ಗೆ, ಅಂಬೇಡ್ಕರ್ ಜಾತಿ ಉಲ್ಲೇಖಿಸಿ ಫೇಸ್ಬುಕ್ ಪೋಸ್ಟ್; ಆರೋಪಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಜಾತಿಯನ್ನು ಉಲ್ಲೇಖಿಸಿ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದ ಸಂಬಂಧ ಮೈಸೂರು ದಕ್ಷಿಣ ಠಾಣೆ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಪ್ರಶ್ನಿಸಿ ಮಂಡ್ಯದ ಮಹೇಶ್ ಕೆ.ಸಿ. ಅಲಿಯಾಸ್ ಮಹೇಶ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ.ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ಆರೋಪಗಳು ವಿಚಾರಣೆಗೆ ಅರ್ಹವಾಗಿವೆ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಯಾವುದೇ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆ ರದ್ದುಪಡಿಸಲು ಒಂದು ಆಧಾರವೂ ಕಂಡುಬಂದಿಲ್ಲ. ಬದಲಾಗಿ, ಆರೋಪ ಪಟ್ಟಿಯಲ್ಲಿರುವ ಅಂಶಗಳು ಪ್ರಕರಣದ ವಿಚಾರಣೆ ನಡೆಯಬೇಕೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ. ಆರೋಪಿಗೆ 25 ಸಾವಿರ ರೂ. ದಂಡ ವಿಧಿಸಿರುವ ನ್ಯಾಯಪೀಠ, ದಂಡದ ಮೊತ್ತವನ್ನು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಅರ್ಜಿದಾರರಿಗೆ ಆದೇಶಿಸಿದೆ.




