ಬೆಂಗಳೂರು | ಪತ್ನಿಯ ಮೊಬೈಲ್ ಸಂಖ್ಯೆ, ಓಟಿಪಿ ಪಡೆದು ಸಮೀಕ್ಷೆ ನಡೆಸಿದ್ದ ಸರಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ: ಪತಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಪತ್ನಿಯ ಮೊಬೈಲ್ಫೋನ್ ಸಂಖ್ಯೆ ಮತ್ತು ಓಟಿಪಿ ಪಡೆದು ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ ನಡೆಸಿದ್ದ ಇಬ್ಬರು ಸರಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಪ್ರಕರಣದಡಿ ಆರೋಪಿ ಪತಿಯನ್ನು ಇಲ್ಲಿನ ಅಶೋಕನಗರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆಸ್ಟಿನ್ಟೌನ್ ನಿವಾಸಿ ಸ್ಟಿಫನ್ ಯಾನೆ ಅನಿಲ್(29) ಬಂಧಿತ. ಅ.10ರಂದು ಸಮೀಕ್ಷೆಗೆ ಹೋಗಿದ್ದ ಕೆಎಸ್ಐಸಿಯ ಕಿರಿಯ ಸಹಾಯಕ ಅಭಿಷೇಕ್ ಮತ್ತು ಅವರ ಸಹಾಯಕ ಪೆದ್ದಯ್ಯ ಅವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಟಿನ್ಟೌನ್ ನಿವಾಸಿ ಸ್ಟಿಫನ್ ಯಾನೆ ಅನಿಲ್, ಫುಡ್ ಡೆಲಿವರಿ ಬಾಯ್ ಆಗಿದ್ದಾನೆ. ಅ.9ರಂದು ಅಭಿಷೇಕ್ ಮತ್ತು ಪೆದ್ದಯ್ಯ ಆಸ್ಟಿನ್ಟೌನ್ನ ಶಾಂತಲಾ ವಾರ್ಡ್ನಲ್ಲಿ ಸಮೀಕ್ಷೆಗೆ ಹೋಗಿದ್ದಾರೆ. ಈ ವೇಳೆ ಸಿಫ್ಟನ್ ಅವರ ಪತ್ನಿಯ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಪಡೆದು, ಸಮೀಕ್ಷೆದಾರರು ನೋಂದಾಯಿಸಿಕೊಂಡಿದ್ದಾರೆ. ಈ ವಿಚಾರ ತಿಳಿದ ಆರೋಪಿ, ಅ.10ರಂದು ಮನೆ ಸಮೀಪದಲ್ಲಿ ಸಮೀಕ್ಷೆ ಮಾಡುತ್ತಿದ್ದ ಅಭಿಷೇಕ್ ಮತ್ತು ಪೆದ್ದಯ್ಯ ಬಳಿ ಬಂದು, ನಾನು ಮನೆಯಲ್ಲಿ ಇಲ್ಲದಿರುವಾಗ ನನ್ನ ಪತ್ನಿಯ ಮೊಬೈಲ್ ಸಂಖ್ಯೆ ಮತ್ತು ಆಕೆಯ ಮೊಬೈಲ್ಗೆ ಬಂದ ಓಟಿಪಿ ಯಾಕೆ ಪಡೆದುಕೊಂಡಿದ್ದಿರಾ? ಎಂದು ಜಗಳ ಮಾಡಿದ್ದಾನೆ.
ಆಗ ಇಬ್ಬರು ಅಧಿಕಾರಿಗಳು ಸಮೀಕ್ಷೆ ನಿಯಮದ ಬಗ್ಗೆ ಮಾಹಿತಿ ನೀಡಿ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಆದರೂ ಸುಮ್ಮನಾಗದ ಆರೋಪಿ, ತನ್ನೊಂದಿಗೆ ಬಂದಿದ್ದ ಸ್ನೇಹಿತನ ಮೂಲಕ ಅಭಿಷೇಕ್ಗೆ ಕಪಾಳಮೋಕ್ಷ ಮಾಡಿಸಿದ್ದಾನೆ. ಅಲ್ಲದೆ, ಪೆದ್ದಯ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮತ್ತೊಂದೆಡೆ ಸ್ಥಳಕ್ಕೆ ಬಂದ ಸ್ಟಿಫನ್ ತಾಯಿ ಗೀತಾ ಯಾನೆ ಮಾರ್ಗರೇಟ್ ಕೂಡ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅಭಿಷೇಕ್ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸದ್ಯ ಸ್ಟಿಫನ್ ಎಂಬಾತನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ. ಆತನ ಸ್ನೇಹಿತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗೀತಾಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







