ಅಕ್ರಮವಾಗಿ ಐಪಿಎಲ್ ಟಿಕೆಟ್ಗಳ ಮಾರಾಟ ಪ್ರಕರಣ: ಡಿಎನ್ಎ ಸಂಸ್ಥೆಗೆ ಸಿಸಿಬಿ ನೋಟಿಸ್

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಐಪಿಎಲ್ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್ಸಿಎ) ಸದಸ್ಯ ಗಣೇಶ್ ಹರಿಕೇಶ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ, RCB ಟಿಕೆಟ್ ನಿರ್ವಹಣೆ ಮಾಡುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.
ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದಾಗ ವಿಚಾರಣೆ ವೇಳೆ ಆತ ಕೆಎಸ್ಸಿಎ ಸದಸ್ಯ ಹರಿಕೇಶ್ ಹೆಸರನ್ನು ಬಹಿರಂಗಪಡಿಸಿದ್ದ. ಆರೋಪಿ ಚಂದ್ರಶೇಖರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಅವನ ಮೂಲಕವೇ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ತನಿಖೆ ನಡೆಸಿದಾಗ ಗಣೇಶ್ ಹರಿಕೇಶ್ ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್ ಹಾಗೂ ಧರಣಿ ಕಂಪ್ಯೂಟರ್ಸ್ ಎಂಬ ಎರಡು ಖಾಸಗಿ ಕಂಪೆನಿಗಳ ಹೆಸರಿನಲ್ಲಿ ಆನ್ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಐಪಿಎಲ್ ಟಿಕೆಟ್ಗಳನ್ನು ಖರೀದಿಸುತ್ತಿದ್ದನು ಎಂದು ತಿಳಿದುಬಂದಿದೆ. ಈ ಕಂಪೆನಿಗಳ ಮೂಲಕ ಟಿಕೆಟ್ಗಳನ್ನು ಪಡೆಯುತ್ತಿದ್ದ ಗಣೇಶ್, ಬಳಿಕ ಅವುಗಳನ್ನು ಚಂದ್ರಶೇಖರ್ ನಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಸದ್ಯ, ಇದೆಲ್ಲದರ ನಡುವೆ RCB ಟಿಕೆಟ್ ನಿರ್ವಹಣೆಯನ್ನು ಹೊತ್ತಿರುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಯ ಮೇಲೂ ಸಿಸಿಬಿಗೆ ಅನುಮಾನ ವ್ಯಕ್ತವಾಗಿದ್ದು, ಸಂಸ್ಥೆಗೆ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.






