ಎಇಇ ಫರ್ವೀಝ್ ನಾಪತ್ತೆ ಪ್ರಕರಣ: ರಕ್ಷಣೆಗೆ ಜೆಡಿಎಸ್ ಆಗ್ರಹ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್)ದಲ್ಲಿ ಬಾಕಿ ಇರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ನಾಪತ್ತೆಯಾಗಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫರ್ವೀಝ್ ಅವರನ್ನು ಕೂಡಲೇ ಪತ್ತೆಹಚ್ಚಿ ರಕ್ಷಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ರವಿವಾರ ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಜೆಡಿಎಸ್, ಗದಗದ ಕೆಆರ್ ಐಡಿಎಲ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫರ್ವೀಝ್ ಅವರು ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವ ಸರಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ಅನುದಾನ ಬಿಡುಗಡೆಯಾಗದೆ ಗುತ್ತಿಗೆದಾರರು ಮನೆಗೆ ಬಂದು ಒತ್ತಡ ಹೇರುತ್ತಿದ್ದಾರೆ, ಇದರಿಂದ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಇಂಜಿನಿಯರ್ ಫರ್ವೀಝ್ ಅವರು ಪತ್ರ ಬರೆದಿದ್ದಾರೆ ಎಂದು ಜೆಡಿಎಸ್ ಆಪಾದಿಸಿದೆ.
ಜೀವನ ಕೊನೆಗಾಣಿಸಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿ ಅಧಿಕಾರಿ ನಾಪತ್ತೆಯಾಗಿದ್ದಾರೆ ಎಂದು ಜೆಡಿಎಸ್ ಹೇಳಿದ್ದು, ಅವರ ಕುಟುಂಬ ಆತಂಕದಲ್ಲಿ ಮುಳುಗಿದೆ.ಈ ಸಂಬಂಧ ರಾಜ್ಯ ಸರಕಾರ ಅವರನ್ನು ಪತ್ತೆಹಚ್ಚುವ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.






