ಶೋಷಣೆಯ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ : ನ್ಯಾ.ವಿ.ಗೋಪಾಲಗೌಡ
ಹಿರಿಯ ವಕೀಲ ಎಸ್.ಬಾಲನ್‌ರ ‘ಗುತ್ತಿಗೆ ಕಾರ್ಮಿಕರ ಬದುಕಿನ ಪ್ರಶ್ನೆ’ ಕೃತಿ ಬಿಡುಗಡೆ

ಬೆಂಗಳೂರು, ನ.15: ಗುತ್ತಿಗೆ ಕಾರ್ಮಿಕರ ಶೋಷಣೆಯನ್ನು ಕೊನೆಗಾಣಿಸಿ, ಅವರಿಗೆ ನ್ಯಾಯಯುತ ವೇತನ ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕಾದರೆ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಶಿಕ್ಷಕರ ಸದನದಲ್ಲಿ ಹಿರಿಯ ವಕೀಲ ಎಸ್.ಬಾಲನ್ ಅವರು ರಚಿಸಿರುವ ‘ಗುತ್ತಿಗೆ ಕಾರ್ಮಿಕರ ಬದುಕಿನ ಪ್ರಶ್ನೆ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಕಾರ್ಮಿಕರ ಶೋಷಣೆ ಮುಂದುವರಿದಿದೆ. ಸಂವಿಧಾನವು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನೀಡಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ ಎಂದರು.
ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕನ್ನು ನೀಡಿದೆ. ಆದರೆ ಖಾಯಂ ನೌಕರರು ಮತ್ತು ಗುತ್ತಿಗೆ ಕಾರ್ಮಿಕರ ನಡುವೆ ವೇತನ ಹಾಗೂ ಸೌಲಭ್ಯಗಳಲ್ಲಿ ತೀವ್ರ ತಾರತಮ್ಯವಿದೆ. ಖಾಯಂ ನೌಕರರು ನಿರ್ವಹಿಸಬೇಕಾದ ಕೆಲಸಗಳನ್ನು ಗುತ್ತಿಗೆ ಕಾರ್ಮಿಕರಿಂದ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಖಾಯಂ ನೌಕರರಿಗೆ ದೊರೆಯುವ ಮೂಲ ವೇತನ, ತುಟ್ಟಿಭತ್ಯೆ, ಆರೋಗ್ಯ ಸೌಲಭ್ಯ, ಸಾರಿಗೆ ಭತ್ಯೆ, ಸಮವಸ್ತ್ರ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳು ಗುತ್ತಿಗೆ ಕಾರ್ಮಿಕರಿಗೆ ದೊರೆಯುತ್ತಿಲ್ಲ ಎಂದು ಗೋಪಾಲಗೌಡ ತಿಳಿಸಿದರು. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಬೆಳೆಸಿಕೊಂಡು ಮಾಲಕರನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಕೇವಲ ಭಾಷಣಗಳನ್ನು ಕೇಳುವುದರಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯವಿಲ್ಲ. ಪುಸ್ತಕಗಳನ್ನು ಓದಿ ಕಾನೂನುಗಳ ಅರಿವು ಪಡೆದು ಸಂಘಟನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕಾರ್ಮಿಕರ ಹಕ್ಕುಗಳನ್ನು ಸರಕಾರಗಳು ಸ್ವಯಂಪ್ರೇರಿತವಾಗಿ ಜಾರಿಗೊಳಿಸುವುದಿಲ್ಲ. ಕಾರ್ಮಿಕರು ಸಂಘಟಿತರಾಗಿ ಹೋರಾಟಕ್ಕೆ ಇಳಿದು ತಮ್ಮ ಶಕ್ತಿಯನ್ನು ತೋರಿಸಿದಾಗ ಮಾತ್ರ ಹಕ್ಕುಗಳ ರಕ್ಷಣೆಗೆ ಆಡಳಿತ ವ್ಯವಸ್ಥೆ ಮುಂದಾಗುತ್ತದೆ. ಗುತ್ತಿಗೆ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಗೋಪಾಲಗೌಡ ಕರೆ ನೀಡಿದರು.
ಕೃತಿಕಾರ ಹಾಗೂ ವಕೀಲ ಎಸ್.ಬಾಲನ್ ಮಾತನಾಡಿ, ಕಾರ್ಮಿಕರ ರಕ್ಷಣೆಗಾಗಿ ಹಲವು ಕಾನೂನುಗಳಿದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿಲ್ಲ. ಕಾರ್ಮಿಕರ ಹಕ್ಕುಗಳು ಕೇವಲ ಪುಸ್ತಕಗಳಲ್ಲಿ ಉಳಿಯದೆ ವಾಸ್ತವದಲ್ಲಿ ಜಾರಿಯಾಗಬೇಕಾದರೆ ಸಂಘಟನೆ, ಕಾನೂನು ಅರಿವು ಮತ್ತು ನಿರಂತರ ಹೋರಾಟ ಅಗತ್ಯ. ಇಂದು ವಿವಿಧ ಕೈಗಾರಿಕೆಗಳು ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಖಾಯಂ ನೌಕರರಿಗಿಂತ ಗುತ್ತಿಗೆ ಕಾರ್ಮಿಕರ ಸಂಖ್ಯೆಯೇ ಹೆಚ್ಚುತ್ತಿದೆ. ಮೆಟ್ರೊ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗೆ 12ರಿಂದ 13 ಸಾವಿರ ರೂ.ಗಳಷ್ಟು ಅಲ್ಪವೇತನ ನೀಡಲಾಗುತ್ತಿದೆ. ಎಲ್ಲ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಸ್.ಬಾಲನ್, ಪತ್ರಕರ್ತ ನವೀನ್ ಸೂರಿಂಜೆ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಐಎಫ್‌ಟಿಯುನ ಟಿ.ಶ್ರೀನಿವಾಸಲು, ಹೊನ್ನಪ್ಪ ಮರಿಯಮ್ಮನವರ್, ಅಭಿರುಚಿ ಪ್ರಕಾಶನದ ಗಣೇಶ್, ಹಲವರು ಭಾಗವಹಿಸಿದ್ದರು.
ಬಾಲನ್ ರಚಿಸಿರುವ ಸಾಹಿತ್ಯವು ಎಸಿ ರೂಮ್‌ಗಳಲ್ಲಿ ಹುಟ್ಟಿದ್ದಲ್ಲ, ಬದಲಾಗಿ ಬೀದಿ ಹೋರಾಟದಿಂದ ಮೂಡಿಬಂದ ನೈಜ ಕಾರ್ಮಿಕ ಸಾಹಿತ್ಯ. ಬಿಡುಗಡೆಗೂ ಮುನ್ನ ಇದರ ಸಾವಿರ ಪ್ರತಿಗಳು ಮಾರಾಟವಾಗಿರುವುದು ಇದಕ್ಕೆ ಸಾಕ್ಷಿ. ಬಾಲನ್ ಅವರು ಕೇವಲ ಕಾರ್ಮಿಕರ ಪರವಾಗಿ ಮಾತ್ರವಲ್ಲದೆ, ಕೋಮುವಾದ ಮತ್ತು ಅನ್ಯಾಯದ ವಿರುದ್ಧವೂ ಧ್ವನಿಯೆತ್ತುತ್ತಾ ನೂರಾರು ಪ್ರಕರಣಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಯಿಲ್ಲದೆ ಕೇವಲ ಕಾರ್ಮಿಕರ ಏಳಿಗೆಗಾಗಿ ಶ್ರಮಿಸುತ್ತಿರುವ ಅವರ ಕೈಬಲಪಡಿಸಬೇಕು.
-ನವೀನ್ ಸೂರಿಂಜೆ, ಪತ್ರಕರ್ತ
ಗುತ್ತಿಗೆ ಕಾರ್ಮಿಕ ಪದ್ಧತಿ ಆಧುನಿಕ ಗುಲಾಮಗಿರಿಯ ಹೊಸ ರೂಪ
ಗುತ್ತಿಗೆ ಕಾರ್ಮಿಕ ಪದ್ಧತಿಯು ಹಿಂದಿನ ಜೀತ ಪದ್ಧತಿ ಮತ್ತು ಗುಲಾಮಗಿರಿಯ ಆಧುನಿಕ ರೂಪವಾಗಿದೆ. ಕಾರ್ಮಿಕರನ್ನು 10ರಿಂದ 12 ಗಂಟೆಗಳ ಕಾಲ ದುಡಿಸಿಕೊಂಡು ಅಲ್ಪವೇತನ ನೀಡಲಾಗುತ್ತಿದೆ. ಉದ್ಯೋಗದ ಭದ್ರತೆ, ಸಾಮಾಜಿಕ ಭದ್ರತೆ ಹಾಗೂ ಘನತೆಯ ಬದುಕಿಗೆ ಅಗತ್ಯವಾದ ಸೌಲಭ್ಯಗಳಿಂದ ಅವರನ್ನು ವಂಚಿಸಲಾಗುತ್ತಿದೆ.
-ಚುಕ್ಕಿ ನಂಜುಂಡಸ್ವಾಮಿ, ರೈತ ಹೋರಾಟಗಾರ್ತಿ






