ಪುನೀತ್ ರಾಜಕುಮಾರ್, ಅಶ್ವಿನಿ ಅವರನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸಿದ್ದೆ: ಡಿ.ಕೆ. ಶಿವಕುಮಾರ್

Photo credit: X/@DKShivakumar
ಬೆಂಗಳೂರು: ರಾಜಕಾರಣಕ್ಕೆ ನಟ ಪುನೀತ್ ರಾಜಕುಮಾರ್ ಅವರನ್ನು ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನ ಪಟ್ಟೆ, ಚಾಕಲೇಟ್ ಕೊಟ್ಟೆ. ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನು ಆಹ್ವಾನಿಸಿದೆ. ಅವರೂ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು, ರಾಜಕಾರಣಕ್ಕೆ ಬರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನಾಧಾರಿತ ಎಐ ತಂತ್ರಜ್ಞಾನ ಬಳಸಿ ಮಾಡಿರುವ 'ಕನ್ನಡದ ಅಪ್ಪು' ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿ, ಅವರು ಮಾತನಾಡಿದರು.
ಅಶ್ವಿನಿ ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ. ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ. ಆದರೆ, ಮುಖ್ಯವಾಹಿನಿಯಲ್ಲಿರಿ ಎಂದು ತಿಳಿಸಿದ್ದೆ. ಇಷ್ಟು ದಿನ ಇದನ್ನು ಬಹಿರಂಗಗೊಳಿಸಿರಲಿಲ್ಲ. ಇಂದು ಬಹಿರಂಗಗೊಳಿಸಿದ್ದೇನೆ ಎಂದರು.
ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ ಎಂದು ಅವರು ತಿಳಿಸಿದರು.
ಎಐ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ ನಲ್ಲಿ ಬಾಲ್ಯಕಾಲದ ಪುನೀತ್ ಸೇರಿದಂತೆ ಇತ್ತೀಚಿನ ದಿನದವರೆಗಿನ ತನಕ ಸೃಷ್ಟಿಸಲಾಗಿದೆ. ಕತ್ತಲೆಗೆ ಹೋಗಿರುವ ಅಪ್ಪು ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ" ಎಂದು ಅವರು ಹೇಳಿದರು.
"ನನಗೆ ಬಹಳಷ್ಟು ರಾಜ್ಯಗಳ ಸಿನಿಮಾ ಸ್ನೇಹಿತರು ಪರಿಚಯ ಇದ್ದಾರೆ. ಯಾರೂ ಈ ಆಲೋಚನೆ ಮಾಡಿಲ್ಲ. ನನ್ನ ಸ್ನೇಹಿತನ ಹೆಸರಿನಲ್ಲಿ ಇಂತಹ ಆ್ಯಪ್ ರೂಪುಗೊಂಡಿದ್ದು, ಅದನ್ನು ಉದ್ಘಾಟನೆ ಮಾಡಲು ನಾನು ಬಂದಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ" ಎಂದರು.
"ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ" ಎಂದರು.
"ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದವರಲ್ಲಿ ಪುನೀತ್ ರಾಜಕುಮಾರ್ ಒಬ್ಬರು. ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳುತ್ತಾರೆ. ನಿಮ್ಮನ್ನ ನೀವು ನಿಯಂತ್ರಣ ಮಾಡಿಕೊಳ್ಳಬೇಕಾದರೆ ಮೆದುಳನ್ನು ಬಳಸಿ ಇತರರನ್ನು ನಿಯಂತ್ರಿಸಬೇಕಾದರೆ ಹೃದಯವನ್ನು ಬಳಸಿ. ಹೃದಯವಂತಿಕೆಯಿಂದ ಪುನೀತ್ ರಾಜಕುಮಾರ್ ಅವರು ಕೆಲಸ ಮಾಡಿದರು. ಇದನ್ನು ಮುಂದುವರೆಸಿಕೊಂಡು ಹೋಗಲು ಆ್ಯಪ್ ಮುಖಾಂತರ ಹೊಸ ಹೆಜ್ಜೆ ಇಡಲಾಗಿದೆ" ಎಂದರು.
"ಸರ್ಕಾರದಿಂದ ಎಲ್ ಇಡಿ ಬಲ್ಬ್ ನೀಡುವ ಯೋಜನೆಗೆ ಪುನೀತ್ ಅವರನ್ನೇ ರಾಯಭಾರಿಯನ್ನಾಗಿ ಮಾಡಲಾಗಿತ್ತು. ಅವರು ಪ್ರೀತಿಯಿಂದ ನನ್ನ ಆಹ್ವಾನ ಒಪ್ಪಿಕೊಂಡಿದ್ದರು" ಎಂದರು.
"ನಾನು ತಂತ್ರಜ್ಞಾನದಿಂದ ದೂರ ಇದ್ದೇನೆ. ಅದರ ಬಗ್ಗೆ ಅರಿವಿದೆ ಆದರೆ ಬಳಸುವ ಪ್ರಮೇಯ ಬಂದಿಲ್ಲ. ಪ್ರತಿದಿನವೂ ಹೊಸ ವಿಚಾರಗಳು ಬರುತ್ತಲೇ ಇರುತ್ತವೆ. ಈಗೀನ ಕಾಲದ ಟಿವಿಯನ್ನು ಆನ್ ಮಾಡಲು ಸಹ ಮಕ್ಕಳ ಅಥವಾ ಹೆಂಡತಿಯ ಸಹಾಯ ಕೇಳುತ್ತೇನೆ" ಎಂದರು.
"ಈ ಕಾರ್ಯಕ್ರಮದ ಬಗ್ಗೆ ತಿಳಿದಾಗ ಇದರಲ್ಲಿ ವಿಶೇಷತೆ ಇದೆ ಎಂದು ಕಾರ್ಯಕ್ರಮಕ್ಕೆ ಬರಲು ಒಪ್ಪಿದೆ. ನಾನು ಡಿಸಿಎಂ ಆಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ ಈ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ ಬಂದಿದ್ದೇನೆ. ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತ. ಎಲ್ಲರಿಗೂ ಶುಭವಾಗಲಿ" ಎಂದರು.
"ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಹೊಸ ಪೀಳಿಗೆಗೆ ಹೊಸ ವಿಚಾರ ತಲುಪಿಸಬೇಕು, ತಾನು ಬೆಳೆದು ಬಂದ ಹಾದಿ ಬಲಿಷ್ಠವಾಗಿ ಬೆಳೆಸಲು ಪುನೀತ್ ಅವರಿಗೆ ದೃಢವಾದ ಸಂಕಲ್ಪ ಇತ್ತು. ಸ್ಯಾಂಡಲ್ ವುಡ್ ಲೋಕದಲ್ಲಿರುವ ಜನರಿಗೆ ಸಿನಿಮಾ ರಂಗದಲ್ಲಿ ಬೆಳೆಯಲು ಆಸಕ್ತಿ ಇರುವವರಿಗೆ ಒಂದು ವೇದಿಕೆಯಾಗಿ ಈ ಆ್ಯಪ್ ರೂಪುಗೊಂಡಿದೆ" ಎಂದರು.







