"ಕೇಂದ್ರ ಚುನಾವಣಾ ಆಯೋಗದ ವಿರುದ್ಧ ʼಎಫ್‍ಐಆರ್ʼ ಸಿದ್ದ": ಎಸ್‍ಐಆರ್ ಪ್ರಕ್ರಿಯೆ ಖಂಡಿಸಿ ಕೋರ್ಟ್ ಕದ ತಟ್ಟಲಿರುವ ಕರ್ನಾಟಕ ನಾಗರಿಕ ಸಂಘಟನೆ
ಸೆ.1ಕ್ಕೆ ಸಂತ್ರಸ್ತರ ಸಾಕ್ಷ್ಯಗಳೊಂದಿಗೆ ‘ಎಲೆಕ್ಷನ್ ಕಮಿಷನ್ ಚಲೋ’

ಬೆಂಗಳೂರು: ರಾಜ್ಯದ ಕನಿಷ್ಠ 60ಲಕ್ಷ ಅರ್ಹರ ಮತದಾನದ ಹಕ್ಕನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ರದ್ದುಗೊಳಿಸಿರುವುದು ಮತ್ತು 43.81ಲಕ್ಷ ಮತದಾರರ ನಾಗರಿಕತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೋಟಿಸ್ ಮೂಲಕ ಮಾನಸಿಕ ಹಿಂಸೆಗೆ ಗುರಿಪಡಿಸಿರುವುದು ಸೇರಿದಂತೆ ಚುನಾವಣಾ ಆಯೋಗದ ಇಡೀ ಎಸ್‍ಐಆರ್ ಪ್ರಕ್ರಿಯೆಯನ್ನೇ ಖಂಡಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೊರೆ ಹೋಗಲು ಕರ್ನಾಟಕ ನಾಗರಿಕ ಸಂಘಟನೆ ‘ಎಫ್‍ಐಆರ್’ ಸಿದ್ದಪಡಿಸಿದೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ನಾಗರಿಕ ಸಂಘಟನೆಗಳ ಮುಖ್ಯಸ್ಥ ನೂರ್ ಶ್ರೀಧರ್, ದೇಶದ ವಿವಿಧ ರಾಜ್ಯಗಳಲ್ಲಿ ಎಸ್‍ಐಆರ್ ಸೃಷ್ಟಿಸಿದ ಅವಾಂತರಗಳನ್ನು ವಿಶೇಷವಾಗಿ ಬಿಹಾರ ಮತ್ತು ಬಂಗಾಳದಲ್ಲಿನ ಅದರ ದುರ್ನಡತೆಗಳನ್ನು ಗಮನಿಸುತ್ತಾ ಬಂದ ಕರ್ನಾಟಕದ ನಾಗರಿಕ ಸಮಾಜವು ಬಹುಬೇಗ ಎಚ್ಚೆತ್ತುಕೊಂಡು ಎಸ್‍ಐಆರ್ ದೋಷಪೂರಿತ ಹಾಗೂ ದುರುದ್ದೇಶಗಳಿಂದ ಕೂಡಿದ ಪ್ರಕ್ರಿಯೆ ಎಂಬುದನ್ನು ನಾನಾ ವಿಧಾನಗಳಲ್ಲಿ ಮನವರಿಕೆ ಮಾಡಿಸುವ ಪ್ರಯತ್ನ ಮಾಡಿದೆ ಎಂದರು.
ಎಸ್‍ಐಆರ್‍ನ ಇಡೀ ಪ್ರಕ್ರಿಯೆ ಅವೈಜ್ಞಾನಿಕ ಹಾಗೂ ಅಪ್ರಜಾತಾಂತ್ರಿಕ ರೀತಿಯಲ್ಲಿ ನಡೆದಿದೆ. ಅದೆಲ್ಲದರ ದಾಖಲೆ ಸಮೇತವಾಗಿ ಎಫ್‍ಐಆರ್ ಅನ್ನು ಸಿದ್ದಪಡಿಸಿಕೊಂಡಿದ್ದೇವೆ. ಈ ಬಗ್ಗೆ ದೊಡ್ಡ ಹೋರಾಟ ನಡೆಯಲಿದೆ. ಜನರಿಗೆ ಎಸ್‍ಐಆರ್ ಪ್ರಕ್ರಿಯೆ ಹಾಗೂ ತಯಾರಿ ಬಗ್ಗೆ ಯಾವ ಮಾಹಿತಿಯನ್ನೂ ನೀಡದೆ ಕೇಂದ್ರ ಚುನಾವಣಾ ಆಯೋಗ ದಿಢೀರನೆ ಎಸ್‍ಐಆರ್ ನಡೆಸಲು ದಿನಾಂಕ ಘೋಷಿಸಿಬಿಟ್ಟಿತು. ಬಿಎಲ್‍ಒಗಳಿಗೆ ಸೂಕ್ತ ತರಬೇತಿಯೂ ನೀಡಲಿಲ್ಲ. ಜಾಹೀರಾತು, ಪ್ರಚಾರ ಇಲ್ಲವೇ ಇಲ್ಲ. ಲಾಜಿಕಲ್ ಡಿಸ್ಕ್ರಿಪೆನ್ಸಿಯ ಕುರಿತು ಬಿಎಲ್‍ಒಗಳಿಗೆ ಸೂಚನೆಗಳನ್ನೇ ಕೊಡಲಿಲ್ಲ. ಬೆಂಗಳೂರಿನ ಬಿಎಲ್‍ಒಗಳು ಸ್ಥಳೀಯರಾಗಿರಲಿಲ್ಲ ಎಂದು ನೂರ್ ಶ್ರೀಧರ್ ತಿಳಿಸಿದರು.
ರಾಜ್ಯದ ಕೆಲವು ಭಾಗಗಳಲ್ಲಿ ಎಸ್‍ಐಆರ್ ಪ್ರಕ್ರಿಯೆ ಆರಂಭಗೊಂಡು 20 ದಿನಗಳೆದರೂ ಎನ್ಯುಮುರೇಷನ್ ಫಾರಂ ಹಂಚಿಕೆಯಾಗಿರಲಿಲ್ಲ. ಬೇರೆ ಪ್ರದೇಶಗಳಿಂದ ಶಿಫ್ಟ್ ಆಗಿ ಬಂದಿರುವ ಮತದಾರರಿಗೆ ಎನ್ಯುಮುರೇಷನ್ ಫಾರಂ ಅನ್ನು ನಿರಾಕರಿಸಲಾಯಿತು. ಫಾರಂ ಅನ್ನು ಯಾರು ತುಂಬಬೇಕು? ಹೇಗೆ ತುಂಬಬೇಕು? ಎಂಬ ಬಗ್ಗೆ ಗೊಂದಲ, ಬಿಎಲ್‍ಒಗಳಿಗೆ ಸ್ಪಷ್ಟತೆ ಇಲ್ಲದಿರುವುದರಿಂದ ರಾಶಿರಾಶಿ ತಪ್ಪುಗಳ ದಾಖಲಾಗಿವೆ. ಎಸ್‍ಐಆರ್ ಒಂದು ಜವಾಬ್ದಾರಿಯುತ ಹಾಗೂ ವ್ಯವಸ್ಥಿತ ಪ್ರಕ್ರಿಯೆ ಎಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲ ಎಂದು ನೂರ್ ಶ್ರೀಧರ್ ತಿಳಿಸಿದರು.
ಇಂತಹ ದೋಷಭರಿತ ಪ್ರಕ್ರಿಯೆ ಮೂಲಕ ಸಿದ್ದಪಡಿಸಿರುವ ಪಟ್ಟಿಯನ್ನು ನಾವೇಕೆ ಒಪ್ಪಿಕೊಳ್ಳಬೇಕು. ಇದರ ಹೊಣೆಯನ್ನು ಡಿಲೀಟ್ ಆದ ನೋಟಿಸ್ ಪಡೆದ ಮತದಾರರು ಏಕೆ ಹೊರಬೇಕು? ಇಷ್ಟೊಂದು ತರಾತುರಿಯಲ್ಲಿ ಇದನ್ನು ಈ ರೀತಿ ನಡೆಸುವ ಅಗತ್ಯವೇನಿತ್ತು? ಈ ಹಿಂದೆ ತೀವ್ರ ಪರಿಷ್ಕರಣೆ ನಡೆಸಿದಾಗ ಪ್ರತಿ ಬೂತಿನಲ್ಲಿರುವ ಪ್ರತಿ ಮನೆಗೆ ಭೇಟಿ ನೀಡಲಾಗುತ್ತಿತ್ತು. ಆ ಬೂತಿನ ಎಲ್ಲ ವಯಸ್ಕ ಮತದಾರರು ಮತಪಟ್ಟಿಯಲ್ಲಿ ಬಂದಿದ್ದಾರೆಯೇ ಎಂದು ಪರಿಶೀಲನೆ ಮಾಡಲಾಗುತ್ತಿತ್ತು. ಹೊಸಬರ ಸೇರ್ಪಡೆಗೆ ಫಾರಂ 6, ತಿದ್ದುಪಡಿ, ಸ್ಥಳಾಂತರ ಇದ್ದರೆ ಫಾರಂ ಕೊಟ್ಟು ಪಟ್ಟಿಯನ್ನು ನವೀಕರಣ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಫಾರಂ 6 ಕೊಟ್ಟು ಹೊಸಬರನ್ನೂ ನೋಂದಾಯಿಸಿಕೊಳ್ಳಲಿಲ್ಲ. ತಿದ್ದುಪಡಿಗಳನ್ನೂ ಮಾಡಲಿಲ್ಲ. ಕೇವಲ ತೆಗೆಯುವ ಕೆಲಸವನ್ನು ಮಾತ್ರ ಮಾಡಲಾಗಿದೆ ಎಂದು ನೂರ್ ಶ್ರೀಧರ್ ದೂರಿದರು.
ಸ್ಥಳಾಂತರಗೊಂಡ ಮತದಾರರನ್ನು ಡಿಲೀಟೆಡ್ ಎಂದು ಪರಿಗಣಿಸಿದ್ದು. ಬೇರೆ ಕಡೆಗೆ ಸ್ಥಳಾಂತರವಾಗಿ ಬಂದವರಿಗೆ ಎನ್ಯುಮುರೇಷನ್ ಫಾರಂ ನಿರಾಕರಿಸಿರುವುದು ಮತ್ತೊಂದು ದೊಡ್ಡ ಅಪರಾಧ. ಸ್ಥಳಾಂತರ ಆದ ಮಾತ್ರಕ್ಕೆ ಡಿಲೀಟ್ ಮಾಡಲು ಬರುವುದಿಲ್ಲ. ಅವರ ಮತವನ್ನು ವರ್ಗಾಯಿಸಿಕೊಳ್ಳಲು ಅವಕಾಶ ನೀಡಬೇಕು. ಅಂತಹ ಅವಕಾಶ ಈ ಪ್ರಕ್ರಿಯೆಯಲ್ಲಿ ಇರಲಿಲ್ಲ ಎಂದು ನೂರ್ ಶ್ರೀಧರ್ ಹೇಳಿದರು.
ಕರ್ನಾಟಕದ 2025ರ ಮತದಾರರ ಪಟ್ಟಿಯಲ್ಲಿದ್ದ 5.54 ಕೋಟಿ ಮತಗಳ ಪೈಕಿ ಈಗ 1.07 ಕೋಟಿ ಮತಗಳನ್ನು ಎಎಸ್‍ಡಿಡಿಒ ವಿಭಾಗದಲ್ಲಿ ಸೇರಿಸಿ ಶಾಶ್ವತವಾಗಿ ಡಿಲೀಟ್ ಮಾಡಲಾಗಿದೆ. ಮತ್ತು 43.81 ಲಕ್ಷ ಮತದಾರರನ್ನು ಅನುಮಾನಾಸ್ಪದ ಮತದಾರರೆಂದು ಪರಿಗಣಿಸಿ, ಅವರಿಗೆ ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸುವಂತೆ ನೋಟಿಸ್ ಕಳಿಸುವ ತೀರ್ಮಾನ ಮಾಡಲಾಗಿದೆ. ಇವರ ಬಗ್ಗೆ ನಿಮಗೆ ಅನುಮಾನ ಬರಲು ಕಾರಣವೇನು? ಅದರ ಪಟ್ಟಿಯನ್ನೇಕೆ ಬಿಡುಗಡೆ ಮಾಡುತ್ತಿಲ್ಲ? ಇವರು ಪರದೇಶಗಳಿಂದ ಬಂದವರಾ? ಎಂದು ನೂರ್ ಶ್ರೀಧರ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ವೀರಸಂಗಯ್ಯ, ಕೆ.ಎಲ್.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
‘ಸೆ.1ಕ್ಕೆ ಎಲೆಕ್ಷನ್ ಕಮಿಷನ್ ಚಲೋ’: ಎಸ್‍ಐಆರ್ ಎಂಬ ದೋಷ ಮತ್ತು ದುಷ್ಟತನದ ಪ್ರಕ್ರಿಯೆನ್ನು ರೂಪಿಸಿರುವ ಕೇಂದೆ ಚುನಾವಣಾ ಆಯೋಗ, ವಿಶೇಷವಾಗಿ ಕೇಂದ್ರದ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸೆಪ್ಟೆಂಬರ್ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸಂತ್ರಸ್ತರ ಸಾಕ್ಷ್ಯಗಳೊಂದಿಗೆ ‘ಎಲೆಕ್ಷನ್ ಕಮಿಷನ್ ಚಲೋ’ ಬೃಹತ್ ಹೋರಾಟವನ್ನು ಆರಂಭಿಸಲಾಗುವುದು ಎಂದು ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್‍ರಾಜ್ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಎಸ್‍ಐಆರ್ ನ ಎಲ್ಲ ಸಂತ್ರಸ್ತ ಮತದಾರರನ್ನೂ ಒಗ್ಗೂಡಿಸಿ ಅವರ ಜೀವಂತ ಸಾಕ್ಷಿಗಳ ಸಮೇತವಾಗಿ ದೊಡ್ಡ ಜನಾಂದೋಲನ ನಡೆಸಲಿದ್ದೇವೆ ಎಂದರು.
ಚುನಾವಣಾ ಆಯೋಗ ನಡೆಸಿರುವ ಪ್ರಕ್ರಿಯೆಯನ್ನಾಗಲಿ, ಅದು ನೀಡಿರುವ ಅಂಕಿ-ಅಂಶವನ್ನಾಗಲಿ, ಅದರ ಹಿಂದಿರುವ ವಿವರಣೆಯನ್ನಾಗಲಿ ನಾವು ಒಪ್ಪಲು ಸಾಧ್ಯವಿಲ್ಲ. ಇದೊಂದು ದೋಷಭರಿತ ಅನಾಗರಿಕ ಪ್ರಕ್ರಿಯೆ. ಇಂತಹ ದೋಷ ಮತ್ತು ದುಷ್ಟತನದ ಪ್ರಕ್ರಿಯೆಯನ್ನು ರೂಪಿಸಿರುವ ಕೇಂದ್ರ ಚುನಾವಣಾ ಆಯೋಗ ಮತ್ತು ಅದರ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯಲಾಗುವುದು ಎಂದು ಪ್ರಕಾಶ್ ರಾಜ್ ಹೇಳಿದರು.
ಎಸ್‍ಐಆರ್ ಹಿಂದಿನ ರಾಜಕೀಯ ಉದ್ದೇಶವೇನಿದೆ. ಈ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕ ಮತ್ತು ಪ್ರಜಾತಾಂತ್ರಿಕವಾದದ್ದಲ್ಲ. ಕೇಂದ್ರ ಚುನಾವಣಾ ಆಯೋಗವು ಸರ್ವಾಧಿಕಾರತ್ವವನ್ನು ಪ್ರದರ್ಶಿಸುತ್ತಿವೆ. ಇದನ್ನು ಈ ದೇಶದ ಪ್ರಜಾತಾಂತ್ರಿಕ ಸಮಾಜ ಖಂಡಿಸುತ್ತದೆ. ಕೇಂದ್ರ ಚುನಾವಣಾ ಆಯೋಗವನ್ನು ಪ್ರಶ್ನಿಸುವಂತಿಲ್ಲ ಎಂಬ ಅಧಿಕಾರವನ್ನು ಕೊಟ್ಟವರ್ಯಾರು? ಆಯೋಗಕ್ಕೆ ಕಾನೂನು ಶಕ್ತಿ ನೀಡಬೇಕೆಂದು ನಿರ್ಧಾರ ಮಾಡಿದವರು ಯಾರು? ಬದುಕಿರುವ ಮತದಾರರನ್ನೂ ಸತ್ತಿದ್ದಾರೆ ಎಂದರೆ ಹೇಗೆ? ಆಯೋಗ ಮಾಡಬೇಕಾದ ಕೆಲಸವೇನು? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.






