ಕೆಪಿಎಸ್ಸಿ ಆಕಾಂಕ್ಷಿಗಳ ಹೋರಾಟಕ್ಕೆ ಕಾಕ್ರೋಚ್ ಜನತಾ ಪಕ್ಷ ಬೆಂಬಲ

Photo: facebook.com/kpscblr
ಬೆಂಗಳೂರು : ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸುವ ಸ್ಥಿತಿಯಲ್ಲಿ ಪಕ್ಷವಿಲ್ಲ ಎಂದು ಸ್ಪಷ್ಟಪಡಿಸಿದೆ.
ಶಿಕ್ಷಣ, ನೇಮಕಾತಿ ಮತ್ತು ಉದ್ಯೋಗಗಳು ಪರಸ್ಪರ ನಿಕಟ ಸಂಬಂಧ ಹೊಂದಿವೆ. ಪ್ರತಿಯೊಂದು ಸರಕಾರಿ ನೇಮಕಾತಿ ಪ್ರಕ್ರಿಯೆಯೂ ನ್ಯಾಯಸಮ್ಮತ, ಪಾರದರ್ಶಕ ಮತ್ತು ನಿಷ್ಪಕ್ಷವಾಗಿರಬೇಕು. ನೇಮಕಾತಿ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಅದು ಯುವಜನರ ಭವಿಷ್ಯಕ್ಕೆ ಧಕ್ಕೆ ತರುವುದಲ್ಲದೆ, ದೇಶದ ದೀರ್ಘಕಾಲೀನ ಪ್ರಗತಿಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಸಿಜೆಪಿ ತಿಳಿಸಿದೆ.
ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಮತ್ತು ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಪಕ್ಷ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ನ್ಯಾಯಯುತ ಆಡಳಿತ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಈ ಹೋರಾಟ ಯಶಸ್ವಿಯಾಗಲಿ ಎಂದು ಸಿಜೆಪಿ ಹಾರೈಸಿದೆ.
ಯುವಜನರ ಹಿತಾಸಕ್ತಿ, ನ್ಯಾಯಯುತ ಉದ್ಯೋಗ ನೇಮಕಾತಿ ಮತ್ತು ಪಾರದರ್ಶಕ ಸುಧಾರಣೆಗಳಿಗಾಗಿ ನಡೆಯುವ ಯಾವುದೇ ಪ್ರಾಮಾಣಿಕ ಹೋರಾಟಕ್ಕೆ ತನ್ನ ನೈತಿಕ ಬೆಂಬಲ ಸದಾ ಮುಂದುವರಿಯಲಿದೆ ಎಂದು ಸಿಜೆಪಿ ಪ್ರಕಟಣೆಯಲ್ಲಿ ಪುನರುಚ್ಚರಿಸಿದೆ.






